ಕೊರೊನಾ ಲಸಿಕೆ ಪಡೆಯುವಂತೆ ಜಾಗೃತಿ – ಡಂಗೂರ ವೀಡಿಯೋ ವೈರಲ್

Public TV
2 Min Read
gadaga dangura

ಗದಗ: ಕೊರೊನಾ ಲಸಿಕೆ ಪಡೆಯುವಂತೆ ಗ್ರಾಮದ ತುಂಬಾ ಡಂಗೂರ ಸಾರುವ ಮೂಲಕವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಆರೋಗ್ಯ ಸಚಿವರಾದ ಡಾ. ಕೆ ಸುಧಾಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಜಾನಪದ ಕಲಾವಿದ ವೀರಪ್ಪ ಕಾಳಿ ಕೊರೊನಾ ಲಸಿಕೆ ಪಡೆಯುವಂತೆ ಗ್ರಾಮದ ತುಂಬಾ ಡಂಗೂರ ಸಾರಿದ್ದಾರೆ. ಡಂಗೂರ ಬಾರಿಸಿ ಕೂಗಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

corona vaccine students 1

ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ. ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಜನಾಂದೋಲನ ಆಗಬೇಕು. ಜಾಗೃತಿ ಮೂಡಿಸಲು ನಮ್ಮ ಹಳ್ಳಿಗಳು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಬರೆದುಕೊಂಡು ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಊರಲ್ಲಿ ಯಾವುದೇ ವಿಷಯಕ್ಕೂ ವೀರಪ್ಕ ಕಾಳಿ ಅವರೆ ಡಂಗೂರ ಸಾರುತ್ತಾರೆ. ಆರೋಗ್ಯ, ಪಡಿತರ ಆಹಾರ, ಜಾತ್ರೆ, ಉತ್ಸವ, ಹಬ್ಬ ಹರಿದಿನಗಳು ಜೊತೆಗೆ ಲಸಿಕೆ ವಿಚಾರವಾಗಿ ಡಂಗೂರ ಸಾರಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಮೊದಲಿನಿಂದಲೂ ಈ ವೀರಪ್ಪನ ಕುಟುಂಬವೇ ಗ್ರಾಮಕ್ಕೆ ಸಂದೇಶ ಸಾರುತ್ತಾ ಬರುತ್ತಿದೆ. ಸುಮಾರು 40 ವರ್ಷಗಳಿಂದ ವೀರಪ್ಪ ಕಾಳಿ ಡಂಗೂರ ಸಂದೇಶ ನೀಡುತ್ತಾ ಬಂದಿದ್ದಾರೆ. ಈಗ ಕೊರೊನಾ ವಿಷಯದಲ್ಲಿ ಬಹುಕಾಯಿಲೆಯುಳ್ಳ 45 ವರ್ಷ ಮೆಲ್ಪಟ್ಟವರು ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೇ ಸಮೀಪದ ನರೇಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಡಂಗೂರ ಸಾರಿದ್ದಾರೆ.

corona dangura gadaga

ಈ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಡಂಗೂರ ಸಾರುವ ವ್ಯಕ್ತಿ ವೀರಪ್ಪ ಸಾಕಷ್ಟು ಖುಷಿ ಪಟ್ಟಿದ್ದಾರೆ. ಈ ಡಂಗೂರ ಸಂದೇಶ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ತುಂಬಾನೆ ಖುಷಿ ಆಗುತ್ತಿದೆ ಎಂದು ಜಕ್ಕಲಿ ಗ್ರಾಮದ ವೀರಪ್ಪ ಕಾಳಿ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *