ಕೋಲಾರ: ರಾಜ್ಯದಲ್ಲಿ ನಡೆದ ಅಕ್ರಮ ಜಿಲೆಟಿನ್ ಸ್ಫೋಟ ಪ್ರಕರಣಗಳ ನಂತರ ಎಚ್ಚೆತ್ತಿರುವ ಗಣಿ ಇಲಾಖೆ ರಾಜ್ಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪರಿಣಾಮ ಇಂದು ಜಿಲ್ಲೆಯಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿದ್ದವರ ಮೇಲೆ ಜಿಲ್ಲಾಡಳಿತ ದಾಳಿ ಮಾಡಿ ನಾಲ್ವರನ್ನು ಬಂಧಿಸಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆನಿಮಿಟ್ಟನಹಳ್ಳಿ ಗ್ರಾಮದ ಬಳಿ. ಜಿಲ್ಲಾಪಂಚಾಯತ್ ಸದಸ್ಯೆ ಗೀತಾ ಅವರ ಪತಿ ವೆಂಕಟೇಶ್ ಗೌಡ ಎಂಬವರ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ ನಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿಗಳ ತಂಡ ದಾಳಿ ಮಾಡಿದಾಗ ಬ್ಲಾಸ್ಟಿಂಗ್ ಮಾಡಲು ಬಂಡೆಗಳಲ್ಲಿ ಸುಮಾರು 70 ಹೋಲ್‍ಗಳನ್ನು ಮಾಡಿ ಅದರಲ್ಲಿ ಜಿಲೆಟಿನ್ ಹಾಗೂ ಮೋನಿಯನ್ ತುಂಬಿರುವುದು ಕಂಡುಬಂದಿದೆ. ದಾಳಿ ವೇಳೆ ಜಿಲ್ಲಾಧಿಕಾರಿಗಳ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಕ್ರಷರ್ ಮಾಲೀಕ ವೆಂಕಟೇಶ್ ಗೌಡ ತಲೆಮರೆಸಿಕೊಂಡಿದ್ದಾರೆ.
ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ನಂತರ ಕಲ್ಲುಗಣಿಗಾರಿಕೆ ಸ್ಫೋಟಕ್ಕೂ ಮೊದಲು ಡೈರೆಕ್ಟರ್ ಜನರಲ್ ಮತ್ತು ಮೈನ್ಸ್ ಸೇಪ್ಟಿ ಇಲಾಖೆಯಿಂದ ಅನುಮತಿ ಪಡೆಯಬೇಕು, ಬ್ಲಾಸ್ಟಿಂಗ್ ಮಾಡುವ ಮೊದಲು ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾಗಿ ಅನುಮತಿ ಪಡೆಯುವವರೆಗೂ ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಮಾಡದಂತೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಗಣಿಮಾಲೀಕರಿಗೂ ನೋಟೀಸ್ ನೀಡಿತ್ತು.
ಆದರೆ ಜಿಲ್ಲೆಯ ಆನಿಮಿಟ್ಟನಹಳ್ಳಿ ವೆಂಕಟೇಶ್ವರ ಸ್ಟೋನ್ ಕ್ರಷರ್ ನಲ್ಲಿ ಈ ನಿಯಮವನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿತ್ತು. ಈ ವೇಳೆ ದಾಳಿ ಮಾಡಿದ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ತಂಡ ನಾಲ್ವರನ್ನು ಬಂಧಿಸಿ ಅಕ್ರಮ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.