– ಕಾಶಪ್ಪನವರ್ ಸ್ವಯಂಘೋಷಿತ ಅಧ್ಯಕ್ಷ
ಬೆಂಗಳೂರು: ನಮ್ಮ ರಾಜೀನಾಮೆ ಕೇಳಲು ಬಸನಗೌಡ ಪಾಟೀಲ್ ಯತ್ನಾಳ್ ಯಾರು? ಬೇಕಿದ್ರೆ ಯತ್ನಾಳ್ ರಾಜೀನಾಮೆ ನೀಡಿ, ಪಕ್ಷೇತರರಾಗಿ ಆಯ್ಕೆಯಾಗಿ ಬರಲಿ ಎಂದು ಸಚಿವ ಮುರುಗೇಶ್ ನಿರಾಣಿ ಸವಾಲ್ ಹಾಕಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮುರುಗೇಶ್ ನಿರಾಣಿ ಏಕವಚನದಲ್ಲಿ ಯತ್ನಾಳ್ ವಿರುದ್ಧ ಕಿಡಿ ಕಾರಿದರು. ಸಿಎಂ ಬಿಎಸ್‍ವೈ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಕಳೆದ 25 ವರ್ಷಗಳಿಂದಲೂ ಯತ್ನಾಳ್ ವಾಗ್ದಾಳಿ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್ ಬಿ ಟೀಂ ಎಂಬಂತೆ ವರ್ತಿಸುತ್ತಿದ್ದಾರೆ. ಪ್ರತಿಪಕ್ಷಗಳಿಗಿಂತ ಇವರೇ ಮಾತನಾಡೋದು ಹೆಚ್ಚಾಗಿದೆ. ಮೊದಲು ರಾಜೀನಾಮೆ ಕೊಟ್ಟು ಬೇರೆಯವರ ಬಗ್ಗೆ ಯತ್ನಾಳ್ ಮಾತನಾಡೋದು ಒಳ್ಳೆಯದು ತಿರುಗೇಟು ನೀಡಿದರು.
ಪಂಚಮಸಾಲಿ ಜೊತೆಗೆ ವೀರಶೈವ ಲಿಂಗಾಯತರನ್ನ 2ಎ ಮೀಸಲಾತಿ ನೀಡುವಂತೆ ಹಿಂದುಳಿದ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇವತ್ತೇ ಮಾಡಬೇಕು, ಸತ್ಯಾಗ್ರಹ ಮಾಡ್ತೀನಿ ಅಂದ್ರೆ ಸಂಪೂರ್ಣ ರಾಜಕೀಯ ಇದೆ. ಜಯಮೃತ್ಯಂಜಯ ಸ್ವಾಮೀಜಿಗಳು ಕೇವಲ ಇಬ್ಬರ ಮಾತು ಕೇಳಿ ನಿರ್ಧಾರ ಮಾಡಬೇಡಿ.. 80 ಲಕ್ಷ ಮಂದಿ ಸಮುದಾಯದವರಿದ್ದೀವಿ.. ಗಡುವು ಕೊಡುವುದು ಸರಿಯಲ್ಲ ಎಂದು ಮನವಿ ಮಾಡಿದರು. ಸ್ವಾಮೀಜಿ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ತಪ್ಪು ಸಂದೇಶ ಹೋಗುತ್ತೆ. ಪಾದಯಾತ್ರೆ ಮಾಡಿದ್ದೀರಿ ಎಲ್ಲರ ಗಮನಕ್ಕೆ ಬಂದಿದೆ. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡರು.
ಸ್ವಯಂಘೋಷಿತ ಅಧ್ಯಕ್ಷ: ಮಾಜಿ ಶಾಸಕ ವಿಜಯಾನಂದ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ. ಯಾರನ್ನ ಕೇಳಿ ಕಾಶಪ್ಪನವರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಶಪ್ಪನವರ ನಡವಳಿಕೆಯಿಂದ ಸಮಾಜಕ್ಕೆ ತೊಂದರೆ ಆದ್ರೆ ಅದಕ್ಕೆ ಅವರೇ ಹೊಣೆ. ಕಾಶಪ್ಪನವರ ಮೈ ಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. 100ಕ್ಕೂ ಹೆಚ್ಚು ಕೇಸ್ ಇರುವ ಕೆಟ್ಟ ಹಿನ್ನೆಲೆ ಇರುವ ಈತ ಸಮುದಾಯದ ಅಧ್ಯಕ್ಷ ಆಗಲು ನಾಲಾಯಕ್. ಸಮುದಾಯ ಸಂಘಟನೆ ಲೀಡ್ ಮಾಡುವವರು ಪಕ್ಷಾತೀತ ವ್ಯಕ್ತಿಯಾಗಿರಬೇಕು. ಇಂತಹ ವ್ಯಕ್ತಿಗಳನ್ನ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರನ್ನ ಘೋಷಿಸಿರೋದು ಕಳಂಕ ಎಂದು ಆಕ್ರೋಶ ಹೊರ ಹಾಕಿದರು.