ಬೆಂಗಳೂರು: ರಾಮಂದಿರಕ್ಕೆ ನಿಧಿ ಸಂಗ್ರದ ಕುರಿತಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಬ್ದಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ಬಜರಂಗದಳದ ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಬಜರಂಗದಳ ಆಕ್ರೋಶ ಹೊರಹಾಕಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷದ್ ನ ಸ್ವಯಂ ಸೇವಕರು ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ರಾಮಮಂದಿರಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಸಮಾಜವು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ, ಉತ್ಸಾಹದಿಂದ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ನಮ್ಮ ಸ್ವಯಂ ಸೇವಕರು ಯಾರಿಂದಲೂ ಬಲವಂತವಾಗಿ ನಿಧಿ ಪಡೆದಿಲ್ಲ. ದೇಶಾದ್ಯಂತ ಎಲ್ಲರೂ ತಾವಾಗಿಯೇ ಮುಂದೆ ಬಂದು ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಈ ಅಭಿಯಾನದ ಕುರಿತು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಶ್ರೀರಾಮ ಭಾರತದ ಅಸ್ಮಿತೆ, ಶ್ರೀರಾಮ ಭಾರತದ ಆದರ್ಶ ರಾಷ್ಟ್ರ ಪುರುಷ, ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು. ಮಾಜಿ ಮುಖ್ಯಮಂತ್ರಿಗಳು ಹೇಳಿಕೆ ಕೊಡುವ ಮುನ್ನ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರ ಬಳಿ ಯಾವ ಪುರಾವೆಗಳು ಇಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ(ಆರ್‍ಎಸ್‍ಎಸ್) ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ವಿಶ್ವ ಹಿಂದೂ ಪರಿಷದ್ ಗಂಭೀರವಾಗಿ ಪರಿಗಣಿಸಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಗಳಿಂದ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಮುಂದೆ ಎಚ್ಚರಿಕೆಯಿಂದ ಹೇಳಿಕೆ ನೀಡಲಿ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ಸಂಘಟನೆಯನ್ನು ನಾಝಿ ಸಂಘಟನೆಗೆ ಹೋಳಿಕೆ ಮಾಡಿರುವುದು ಖಂಡನೀಯ. ನಾಝಿ ಸಂಘ ಕೊಲೆ ಹಿಂಸೆಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಇತಿಹಾಸವಿದೆ. ಆದರೆ ದೇಶ ಭಕ್ತ ಸಂಘಟನೆಯಾದ ಆರ್‍ಎಸ್‍ಎಸ್ ಸಂಘಟನಾ ಇತಿಹಾಸದಲ್ಲಿ ಲಕ್ಷಾಂತರ ದೇಶ ಭಕ್ತರನ್ನು ದೇಶಕ್ಕಾಗಿ ಕೊಟ್ಟಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಕುಮಾರಸ್ವಾಮಿ ಹೇಳಿಕೆ ಕೊಡಬೇಕು ಬೇಕಾಬಿಟ್ಟಿ ಸಂಘಟನೆಯ ಕುರಿತು ಮಾತನಾಡಿರುವುದು ಖಂಡನೀಯ ಎಂದರು.