ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳು ಪುನಾರಂಭವಾಗಿದೆ. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮ ಊರಿಂದ ಯಮನ ಮೇಲೆ ಬರುತ್ತಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ ತಾಲೂಕಿನ ಹಳ್ಳಿಗಳಿಗೆ ಸರ್ಕಾರಿ ಬಸ್‍ಗಳ ಸಂಚಾರ ತೀರಾ ಕಡಿಮೆ. ಹೀಗಾಗಿ ಹಳ್ಳಿಗಳಿಂದ ತಾಲೂಕು ಕೇಂದ್ರದ ಶಾಲಾ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಖಾಸಗಿ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಜೀವದ ಹಂಗು ತೊರೆದು ಬಸ್ ಟಾಪ್ ಮೇಲೆ ಕೂತು ವಿದ್ಯಾರ್ಥಿಗಳು ಪ್ರಯಾಣ ಮಾಡ್ತಾರೆ.
ಕೋವಿಡ್ ಸಮಯದಲ್ಲಿ ಸ್ತಬ್ಧವಾಗಿದ್ದ ಸರ್ಕಾರಿ ಬಸ್ಸುಗಳ ಸೇವೆ ಮರು ಆರಂಭವಾಗಿಲ್ಲ. ಬಹುತೇಕ ಹಳ್ಳಿ ಬಸ್ಸುಗಳ ರೂಟ್‍ನ್ನೇ ನಿಲ್ಲಿಸಲಾಗಿದೆ. ಹೀಗಾಗಿ ಆಯಾ ಮಾರ್ಗಗಳಲ್ಲಿ ಬರೋ ಕೆಲ ಖಾಸಗಿ ಬಸ್ಸುಗಳನ್ನ ಜನ ಅವಲಂಬಿಸುವಂತಾಗಿದೆ. ಕ್ರಮ ಕೈಗೊಳ್ಳಬೇಕಾದ ಸಾರಿಗೆ ಅಧಿಕಾರಿಗಳು ಪರಿಶೀಲನೆ ಮಾಡುತ್ತೇವೆಂದು ಹಾರಿಕೆ ಉತ್ತರ ನೀಡುವ ಮೂಲಕ ಜಾಣ ಕುರುಡರಾಗಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಮಂಡ್ಯ ಬಸ್ ದುರಂತ ಬಳಿಕ ಬಸ್ಸುಗಳ ಟಾಪ್ ಪ್ರಯಾಣಕ್ಕೆ ಮೂರ್ನಾಲ್ಕು ದಿನ ಕಡಿವಾಣ ಹಾಕಿದ್ದ ಅಧಿಕಾರಿಗಳು ಮತ್ತೆ ಮರೆತುಬಿಟ್ಟರು. ಈಗ ಕೋರೊನಾ ಸಂಕಷ್ಟದ ಮಧ್ಯೆ ವಿದ್ಯಾಭ್ಯಾಸಕ್ಕಾಗಿ ಶಾಲೆ ಕಾಲೇಜುಗಳತ್ತ ಮುಖ ಮಾಡ್ತಿರೋ ವಿದ್ಯಾರ್ಥಿಗಳು ಪ್ರಾಣಭಯದಲ್ಲೇ ಪ್ರಯಾಣ ಮಾಡ್ತಿದ್ದಾರೆ.