ಆಯವ್ಯಯದ ಒಟ್ಟು ಮೊತ್ತದಲ್ಲಿ ಉನ್ನತ ಶಿಕ್ಷಣಕ್ಕೆ ಶೇ.3.5ರಷ್ಟು ಅನುದಾನಕ್ಕೆ ಕೋರಿಕೆ

Public TV
4 Min Read
DCM

– 9,000 ಬೋಧಕ ಹುದ್ದೆ ಮಂಜೂರಿಗೆ ಮನವಿ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡುತ್ತಿರುವುದು ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿ ಮಾಡಬೇಕಿರುವ ಕಾರಣ 2021-22ನೇ ಸಾಲಿನ ಆಯವ್ಯಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಅನುದಾನ ಒದಗಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ.

DCM 1

ಬೆಂಗಳೂರಿನಲ್ಲಿ ಸೋಮವಾರ ನಡೆದ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಜೆಟ್ ಪೂರ್ವ ಸಭೆಯಲ್ಲಿ ಡಿಸಿಎಂ ರಾಜ್ಯದ ಒಟ್ಟು ಬಜೆಟ್ ಗಾತ್ರದಲ್ಲಿ ಕನಿಷ್ಠ ಶೇ.3.5ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು, ಅದಕ್ಕೆ ಪೂರಕವಾದ ಎಲ್ಲ ಅಂಶಗಳನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

9,000 ಬೋಧಕ ಹುದ್ದೆ ಮಂಜೂರು ಅಗತ್ಯ
ರಾಜ್ಯದಲ್ಲಿ 21,94,070 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಕೃಷಿ, ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಗುಣಮಟ್ಟದ ಕಲಿಕೆ, ಬೋಧನೆಗೆ ಅನುವಾಗುವಂತೆ ರಾಜ್ಯದಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ ಜತೆಗೆ, ಹೆಚ್ಚುವರಿಯಾಗಿ 9,000ಕ್ಕೂ ಹೆಚ್ಚು ಬೋಧಕ ಹುದ್ದೆಗಳನ್ನು ತುರ್ತಾಗಿ ಮಂಜೂರು ಮಾಡಬೇಕಾಗಿದ್ದು, ಇದರೊಂದಿಗೆ ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿ ಬೋಧಕ ಹುದ್ದೆಗಳು ಬಹಳ ದಿನಗಳಿಂದಲೂ ಖಾಲಿ ಇವೆ. ಇದರಿಂದ ಗುಣಮಟ್ಟದ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ಈ ವರ್ಷದಲ್ಲೇ ಇವಿಷ್ಟೂ ಹುದ್ದೆಗಳನ್ನು ತುಂಬುವುದು ಅನಿವಾರ್ಯ ಎಂದರು.

ಅಭಿವೃದ್ಧಿಗೆ ಅನುದಾನ ಸಾಲದು
ಉನ್ನತ ಶಿಕ್ಷಣ ಇಲಾಖೆಗೆ 2020-21ರ ಮುಂಗಡ ಪತ್ರದಲ್ಲಿ ಮಂಜೂರಾದ ಒಟ್ಟು 4,687 ಕೋಟಿ ರೂ. ಅನುದಾನದಲ್ಲಿ ಶೇ.88ರಷ್ಟು ಅಂದರೆ 3,998 ಕೋಟಿ ರೂ. ವೇತನಕ್ಕೇ ಹೋಗಿದೆ. ಉಳಿದ ಶೇ.12ರಷ್ಟು ಅಂದರೆ 595 ಕೋಟಿ ರೂ. ಮೊತ್ತದಲ್ಲಿ ಇಲಾಖೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಯೋಜನೆಗಳೆಲ್ಲವೂ ನೆನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಬಜೆಟ್ ಹಂಚಿಕೆ ಮೊತ್ತವನ್ನು ಹೆಚ್ಚಿಸಬೇಕು ಎಂದು ಉಪ ಮುಖ್ಯಮಂತ್ರಿಗಳು ಮನವಿ ಮಾಡಿದರು.

DCM ASHWATH NARAYAN

2014-15ರ ಮುಂಗಡ ಪತ್ರದಿಂದಲೂ ಉನ್ನತ ಶಿಕ್ಷಣಕ್ಕೆ ಅನುದಾನ ಏರಿಕೆ ಅಗಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ ಡಿಸಿಎಂ ಅವರು 2014-15ರಲ್ಲಿ 15,16,315 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆಗ ರಾಜ್ಯ ಬಜೆಟ್‍ನ ಒಟ್ಟು ಗಾತ್ರದಲ್ಲಿ ಶೇ.3.52ರಷ್ಟು ಅಂದರೆ, 4,673 ಕೋಟಿ ರೂ. ಅನುದಾನವನ್ನು ಒದಗಿಸಲಾಗಿತ್ತು. ಕ್ರಮೇಣವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆಲ್ಲ ಅನುದಾನವೂ ಹೆಚ್ಚಲಿಲ್ಲ. ಅದಕ್ಕೆ ಪೂರಕವಾಗಿ ನೋಡುವುದಾದರೆ, 2019-20ರ ಮುಂಗಡ ಪತ್ರದಲ್ಲಿ ಇಲಾಖೆಗೆ ಶೇ.1.91ರಷ್ಟು ಅನುದಾನವನ್ನಷ್ಟೇ ಒದಗಿಸಲಾಯಿತು. ಆ ವರ್ಷ 17,02,346 ವಿದ್ಯಾರ್ಥಿಗಳಿದ್ದರು. ಅದೇ 2020-21ರ ಬಜೆಟ್‍ಗೆ ಬಂದರೆ ಶೇ.1.97ರಷ್ಟು ಅಂದರೆ 4,688 ಕೋಟಿ ರೂ. ಅನುದಾನವನ್ನು ನೀಡಲಾಯಿತು. ಆಗ 17,15,748 ವಿದ್ಯಾರ್ಥಿಗಳಿದ್ದರು. ಈ ಅಂಶಗಳನ್ನು ಪರಿಗಣಿಸಿ ಅನುದಾನವನ್ನು ಹೆಚ್ಚಿಸಬೇಕು ಎಂದು ಅವರು, ಸಿಎಂ ಅವರನ್ನು ಕೋರಿದರು.

ಇದೇ ರೀತಿ ಉನ್ನತ ಶಿಕ್ಷಣಕ್ಕೆ ತೆಗೆದಿರಿಸಲಾಗುತ್ತಿರುವ ಒಟ್ಟು ರಾಜ್ಯ ಉತ್ಪನ್ನದಲ್ಲೂ ಏರಿಕೆಯಾಗಬೇಕಿದೆ. 2014-15ರಲ್ಲಿ ಶೇ.0.51ರಷ್ಟು ಅಂದರೆ 4673 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಅದೇ 2020-21ಕ್ಕೆ ಬಂದರೆ ಶೇ.0.26ರಷ್ಟನ್ನು ಮಾತ್ರ, ಅಂದರೆ, 4688 ಕೋಟಿ ರೂ.ಗಳನ್ನಷ್ಟೇ ಮೀಸಲಿರಿಸಲಾಗಿದೆ. ಈ ಮೊತ್ತ ಉನ್ನತ ಶಿಕ್ಷಣಕ್ಕೆ ಸಾಲದು ಎಂಬ ಅಂಶವನ್ನು ಉಪ ಮುಖ್ಯಮಂತ್ರಿಗಳು ಉಲ್ಲೇಖ ಮಾಡಿದರು.

ಈ ವರ್ಷದಿಂದಲೇ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣಕ್ಕೆ ಆಯಾ ರಾಜ್ಯದ ಒಟ್ಟು ಬಜೆಟ್ ಗಾತ್ರದಲ್ಲಿ ಶೇ.6ರಷ್ಟು ಮೊತ್ತವನ್ನು ಮೀಸಲಿಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದ ಡಿಸಿಎಂ ಸಾರ್ವಜನಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ಗುಣಮಟ್ಟ, ಬೋಧನೆ ಹಾಗೂ ಕಲಿಕೆ ಆಧಾರದಲ್ಲಿ ಇಷ್ಟು ಮೊತ್ತದ ಅನುದಾನ ಅಗತ್ಯ ಎಂದು ನೀತಿಯಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.

cm yadiyurappa video

 

ಕೆಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಕಡಿಮೆ ಅನುದಾನ ನೀಡುತ್ತಿದೆ. ತಮಿಳುನಾಡು ರಾಜ್ಯವು 2018-19ರಲ್ಲೇ ಈ ಕ್ಷೇತ್ರಕ್ಕೆ ಶೇ.0.37ರಷ್ಟು, ಆಂಧ್ರ ಪ್ರದೇಶ ಶೇ.0.44ರಷ್ಟು, ಮಹಾರಾಷ್ಟ್ರ ಶೇ.1.22ರಷ್ಟು ಹಾಗೂ ಉತ್ತರ ಪ್ರದೇಶ ಶೇ.2.20ರಷ್ಟು ಅನುದಾನವನ್ನು ನೀಡಿವೆ ಎಂಬ ಅಂಶವನ್ನು ಒತ್ತಿ ಹೇಳಿದರು.

ಪರಿಶಿಷ್ಟರಿಗೆ ಹೆಚ್ಚು ಅನುದಾನ ಕೊಡಿ
ರಾಜ್ಯದ ಬಹುತೇಕ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳೆಲ್ಲರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1,17,527 ವಿದ್ಯಾರ್ಥಿಗಳಿದ್ದು, ಇವರಿಗೆ ನಮ್ಮ ಆಯವ್ಯಯದಲ್ಲಿ ಒಟ್ಟು ಶೇ.1.37 ಅಂದರೆ 51.21 ಕೋಟಿ ರೂ. ಅನುದಾನವಷ್ಟೇ ದೊರೆಯುತ್ತಿದೆ. ಇದರ ಪ್ರಮಾಣವನ್ನು ಕೂಡ ಹೆಚ್ಚಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು.

ಮೂಲಸೌಕರ್ಯಗಳಿಗೂ ಕೊರತೆ
ಉನ್ನತ ಶಿಕ್ಷಣಕ್ಕೆ ಸಿಗುತ್ತಿರುವ ಒಟ್ಟು ಅನುದಾನದಲ್ಲಿ ಶೇ.88ರಷ್ಟು ವೇತನಕ್ಕೆ ಹೋಗುತ್ತಿರುವ ಕಾರಣದಿಂದ ಉಳಿದ ಶೇ.12ರಷ್ಟು ಅನುದಾನದಿಂದ ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆಗಳಿಗೆ ಅತ್ಯಗತ್ಯವಾಗಿ ಬೇಕಿರುವ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸಲು ಹಿನ್ನೆಡೆ ಉಂಟಾಗಿದೆ. ಈ ಹಿನ್ನೆಲೆ ಅನುದಾನವನ್ನು ಹೆಚ್ಚಿಸಬೇಕು ಎಂದು ಡಿಸಿಎಂ ತಿಳಿಸಿದರು.

ಇದರೊಂದಿಗೆ ಹಂಪಿ, ಸಂಸ್ಕೃತ, ಜಾನಪದ, ಬೆಂಗಳೂರು ಉತ್ತರ, ಬೆಂಗಳೂರು ನಗರ, ರಾಯಚೂರು, ಮಹಾರಾಣೀ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗಾ ವಿಶ್ವವಿದ್ಯಾಲಯಗಳ ಅನೇಕ ಮನವಿಗಳು ಬಾಕಿ ಇವೆ. ಅಲ್ಲಿ ಕಟ್ಟಡ ನಿರ್ಮಾಣ ಮತ್ತಿತರೆ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಅದೇ ರೀತಿ ಹೊಸದಾಗಿ ಆರಂಭವಾಗಿರುವ ವಿವಿಗಳ ವೇತನಕ್ಕೂ ಅನುದಾನದ ಅಗತ್ಯವನ್ನು ಉಪ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟರು. ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *