– ಮೀಸಲಾತಿ ವಿಚಾರದಲ್ಲಿ `ಕೈ’ಚೆಲ್ಲಿದ್ರಾ ಸಿಎಂ?
– ಭರವಸೆ ನೀಡಿ ಪೇಚಿಗೆ ಸಿಲುಕಿದ ಬಿಎಸ್‌ವೈ
ಬೆಂಗಳೂರು: ಚುನಾವಣೆ ಸೇರಿ ಕೆಲವು ಸಂದರ್ಭಗಳಲ್ಲಿ ಸಮುದಾಯಗಳನ್ನು ಓಲೈಸಿಕೊಳ್ಳಲು, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ಕೈಲಿ ಈಡೇರಿಸಲು ಆಗದೇ ಇರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ನಾಯಕರು ನಂತರ ಪೇಚಿಗೆ ಸಿಲುಕಿದ್ದರು. ಇದೀಗ ಅಂಥಾದ್ದೇ ಪರಿಸ್ಥಿತಿ ಯಡಿಯೂರಪ್ಪಗೆ ಎದುರಾಗಿದೆ.
ವಿಧಾನಮಂಡಲ ಅಧಿವೇಶದ ಕೊನೆಯ ದಿನವಾದ ಇಂದು, ಪಂಚಮಸಾಲಿ, ಹಾಲುಮತ ಸಮುದಾಯಗಳ 2-ಎ ಮೀಸಲಾತಿ ವಿಚಾರವಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಸನ ಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ಈ ಆಗ್ರಹಕ್ಕೆ ತಾಳ್ಮೆ ಕಳೆದುಕೊಂಡಂತೆ ಕಂಡು ಬಂದ ಸಿಎಂ ಯಡಿಯೂರಪ್ಪ, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷ ಅಲ್ಲ. ಮೋದಿ, ಹೈಕಮಾಂಡ್ ಸಲಹೆ ಪಡೆದು ತೀರ್ಮಾನ ಮಾಡಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ಸದ್ಯಕ್ಕೆ ನಾನೇನು ಮಾಡುವ ಸ್ಥಿತಿಯಲ್ಲಿ ಇಲ್ಲ. ಈ ಸಮಸ್ಯೆ ಬಗೆಹರಿಸುವ ಶಕ್ತಿ ಸಾಮರ್ಥ್ಯ ನನಗಿಲ್ಲ ಎಂದು ಕೈ ಎತ್ತಿಬಿಟ್ಟರು. ಅಲ್ಲದೇ, ದೆಹಲಿಯಲ್ಲಿ 25 ಸಂಸದರಿದ್ದಾರೆ. ಯಾರನ್ನೂ ಬೇಕಿದ್ರೂ ಕರೆದುಕೊಂಡು ಹೈಕಮಾಂಡ್ ಭೇಟಿಯಾಗಿ ಅಂತಾ ಯತ್ನಾಳ್‍ಗೆ ಉಚಿತ ಸಲಹೆ ಕೊಟ್ಟರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಂಡೆಪ್ಪ ಕಾಶೆಂಪುರ, ನೀವು ಮೊದಲು ಇಲ್ಲಿ ಶಿಫಾರಸು ಮಾಡಿ. ಅಲ್ಲಿನ ನಿರ್ಧಾರದ ಬಗ್ಗೆ ಆಮೇಲೆ ನೋಡೋಣ ಎಂದರು. ಇದಕ್ಕೆ ಉತ್ತರ ನೀಡುವ ಸಾಹಸವನ್ನು ಸಿಎಂ ಯಡಿಯೂರಪ್ಪ ಮಾಡಲಿಲ್ಲ.
ಪಂಚಮಸಾಲಿ ಸಮುದಾಯಕ್ಕೆ ಕೊಟ್ಟ ಭರವಸೆ ಈಡೇರಿಸಲಾಗದೇ ಈಗ ಸಿಎಂ ಯಡಿಯೂರಪ್ಪ ಕೈ ಎತ್ತಿಬಿಟ್ಟಿದ್ದಾರೆ. ಹೈಕಮಾಂಡ್ ಅಂಗಳಕ್ಕೆ ಚೆಂಡು ನೂಕಿ ಸುಮ್ಮನಾಗಿದ್ದಾರೆ. ಇದರಿಂದಾಗಿ ಬಿಜೆಪಿ ಸರ್ಕಾರ ಪೇಚಿಗೆ ಸಿಲುಕಿದೆ.
2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತ ಸಮುದಾಯ ನಡೆಸಿರುವ ಪಾದಯಾತ್ರೆ 23ನೇ ದಿನ ಪೂರೈಸಿದೆ. ಈ ಪಾದಯಾತ್ರೆ ನಿಲ್ಲಿಸಲು ನಾನಾ ವಿಧದಲ್ಲಿ ಶತ ಪ್ರಯತ್ನ ಮಾಡಿದ್ದ ಯಡಿಯೂರಪ್ಪ, ನಿನ್ನೆ ಇಬ್ಬರು ಸಚಿವರನ್ನು ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದ ಸ್ವಾಮೀಜಿಗಳ ಬಳಿಗೆ ಕಳುಹಿಸಿದ್ದರು.
ಶೀಘ್ರವೇ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಹೊರಡಿಸುವುದಾಗಿ ಸಚಿವರ ಮೂಲಕ ಹೇಳಿ ಕಳುಹಿಸಿದ್ದರು. ಆದರೆ ಇದಕ್ಕೊಪ್ಪದ ಸ್ವಾಮೀಜಿಗಳು, ಮೊದಲು ಆದೇಶ ಹೊರಡಿಸಿ, ಆಮೇಲೆ ಪಾದಯಾತ್ರೆ ನಿಲ್ಲಿಸುತ್ತೇವೆ ಎಂದು ಕಡ್ಡಿ ತುಂಡಾದಂತೆ ಸ್ಪಷ್ಟಪಡಿಸಿದರು. ಇದರಿದಾಂಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಬ್ಬರು ಸಚಿವರುವಾಪಸ್ಸಾಗಿದ್ದರು.