ಬೆಳಗಾವಿ: ಕಲ್ಲಿನ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂಬ ವದಂತಿ ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಹರಿದಾಡುತ್ತಿದೆ. ಶಿವಲಿಂಗ ಮೂರ್ತಿಯನ್ನು ನೋಡಲು ದೇವಾಲಯದತ್ತ ಭಕ್ತಸಾಗರವೇ ಹರಿದುಬರುತ್ತಿದೆ.
ಬೆಳಗಾವಿ ಜಿಲ್ಲೆ ಗೋಕಾಕ್‍ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಿದ್ದಾರೆ. ಅದನ್ನು ನೋಡಲು ಭಕ್ತರು ತಂಡೋಪತಂಡವಾಗಿ ಶಂಕರಲಿಂಗ ದೇವಾಲಯಕ್ಕೆ ಬರುತ್ತಿದ್ದಾರೆ.
ಶಿವಲಿಂಗ ವೀಕ್ಷಿಸಿದ ಜನರು ಇಂದು ರಾತ್ರಿ ಸಂಕಷ್ಠಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದೇವಾಲಯದ ಆರ್ಚಕರು ಈ ಹಿಂದೆ 2004 ರಲ್ಲಿಯೂ ಇದೇ ರೀತಿ ಶಿವಲಿಂಗದಲ್ಲಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು. ಇದೀಗ ಪುನಃ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷವಾಗಿದೆ. ಇದು ಶುಭ ಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ.
ಈ ಹಿಂದೆ ಸಾಯಿಬಾಬಾ ಫೋಟೋದಲ್ಲಿ ವಿಭೂತಿ ಉದುರಿತ್ತು, ಗಣೇಶ ಹಾಲು ಕುಡಿದಿತ್ತು, ಹೀಗೆ ಹಲವಾರು ರೀತಿಯ ವದಂತಿಗಳು ಹಬ್ಬಿದ್ದವು. ಇದೀಗ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಜನ ದಂಡೇ ದೇವಾಲಯದತ್ತಾ ಹರಿದುಬರುತ್ತಿದೆ.