ಚಿತ್ರದುರ್ಗ: ಸಚಿವರ ಖಾತೆ ಬದಲಾವಣೆ ಮಾಡಿದಾಗ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತೇ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆ ಬದಲಾವಣೆಯಿಂದಾಗಿ ಸರ್ಕಾರಕ್ಕೆ ಕಂಟಕ ಎದುರಾಗಬಹುದಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ಸಚಿವರ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಲಿದ್ದಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗಾಗಿ ಸಮರ್ಥ ಮಂತ್ರಿ ಮಂಡಲ ರಚನೆ ಮಾಡುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಕೆಲ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸಮರ್ಥರಾದವರಿಗೆ ಖಾತೆ ನೀಡುವುದರಿಂದ ದೇಶ ಬದಲಾವಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.
ಹಾಗೆಯೇ ಸಚಿವರ ಖಾತೆ ಬದಲಾವಣೆಯ ತೀರ್ಮಾನವನ್ನು ಸಿಎಂ ಬಿಎಸ್ ವೈ ಅವರೇ ಮಾಡಲಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ಸದ್ಯ ರಾಜ್ಯದಲ್ಲಿ ಸಮರ್ಥವಾದ ಮಂತ್ರಿ ಮಂಡಲವಿದೆ. ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಗೆ ಖಾತೆ ವಿಚಾರವಾಗಿ ಸಮಾಧಾನವಾಗಿದ್ದಾರೆ. ಅವರಿಗೆ ಈ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಮುಂದೆ ಹೇಳಿದ್ದಾರೆ ಎಂದು ತಿಳಿಸುವ ಮೂಲಕ ಸಚಿವ ಸಂಪುಟದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.