ಬಳ್ಳಾರಿ: ಸಾರಿಗೆ ನೌಕರರ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಳ್ಳಾರಿಯಲ್ಲಿ ತಡರಾತ್ರಿ ಮತ್ತೊಂದು ಬಸ್ಸಿಗೆ ಕಲ್ಲೂ ತೂರಾಟ ಮಾಡಲಾಗಿದೆ.
ಹೊಸಪೇಟೆಯಿಂದ ಬಳ್ಳಾರಿಗೆ ಬರುತ್ತಿದ್ದ ಬಸ್, ಅಲ್ಲಿಪುರ ಬಳಿ ಬರುತ್ತಿದ್ದಂತೆಯೇ ಕಲ್ಲು ತೂರಿ ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಕಲ್ಲು ಹೊಡೆದಿದ್ದರಿಂದ ಬಸ್ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದೆ. ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಿನ್ನೆ ಮಧ್ಯಾಹ್ನ ಎರಡು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಸಾರಿಗೆ ನೌಕರ ಮುಷ್ಕರದ ನಡುವೆಯೂ ಬಸ್ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಹೆಲ್ಮೆಟ್ ಹಾಕಿಕೊಂಡು ಬಂದು ಬಸ್ಸಿನ ಗ್ಲಾಸ್ ಹೊಡೆದಿದ್ದಾರೆ. ಈ ಬಸ್ಸುಗಳನ್ನು ಬಳ್ಳಾರಿ ಗ್ರಾಮೀಣ ಠಾಣೆಗೆ ರವಾನಿಸಲಾಗಿತ್ತು.
ಒಟ್ಟು ಈವರೆಗೂ ಬಳ್ಳಾರಿ ಜಿಲ್ಲೆಯಾದ್ಯಂತ ಮೂರು ಬಸ್ಸಿಗೆ ಕಲ್ಲೂ ತೂರಾಟ ನಡೆಸಲಾಗಿದೆ. ನಿನ್ನೆ ರಾತ್ರಿ ನಡೆದ ಘಟನೆ ಸಂಬಂಧ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.