– ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ
ಲಕ್ನೋ: ಹನುಮ ಜನ್ಮಭೂಮಿಯಾದ ಬಳ್ಳಾರಿ ಜಿಲ್ಲೆಯ ಕಿಷ್ಕಿಂದೆಯಲ್ಲಿ ವಿಶ್ವದ ಅತೀ ಎತ್ತರದ ಹನುಮಂತನ ಪ್ರತಿಮೆಯನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ಹನುಮಂತ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಕುರಿತು ಮಾತನಾಡಿದ ಅವರು, 215 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 1,200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಹನುಮಂತನ ಪ್ರತಿಮೆಯಾಗಲಿದೆ. ಬಳ್ಳಾರಿಯ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರಾದ್ಯಂತ ರಥಯಾತ್ರೆ ಮಾಡುವ ಮೂಲಕ ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ರಾಮಜನ್ಮಭೂಮಿಯಲ್ಲಿ ರಥ ನಿರ್ಮಾಣದ ಕುರಿತು ಮಾತನಾಡಿರುವ ಅವರು, ರಾಮಜನ್ಮ ಭೂಮಿಯಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ 80 ಅಡಿ ಎತ್ತರದ ರಥ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ವರ್ಷದಲ್ಲಿ ರಥ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬೋನೊ ವಿನ್ಯಾಸದ ಕಲ್ಪನೆಗಳನ್ನು ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದನ್ನು ರಾಮ ಮಂದಿರ ನಿರ್ಮಾಣದ ಅಂತಿಮ ಮಾಸ್ಟರ್ ಪ್ಲಾನ್‍ನಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಟ್ರಸ್ಟ್ ಹೇಳಿದೆ. ಧಾರ್ಮಿಕ ಯಾತ್ರೆ, ಆಚರಣೆಗಳು, ಸಂಸ್ಕೃತಿ ಹಾಗೂ ವೈಜ್ಞಾನಿಕ ಯೋಜನೆಗಳ ಪ್ರಮುಖ ಅಂಶಗಳ ಆಲೋಚನೆಗಳನ್ನು ತಿಳಿಸುವಂತೆ ಹೇಳಿದೆ.