– ಬಲವಂತವಾಗಿ ಕಾರೊಳಗೆ ದೂಡಿ ಅಪಹರಣಕ್ಕೆ ಯತ್ನ
ಚಂಡೀಗಢ: ಕಾಲೇಜಿನ ಹೊರಗಡೆಯೇ 21 ವರ್ಷದ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಭಯಾನಕ ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ನಡೆದಿದ್ದು, ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಪರೀಕ್ಷೆ ಬರೆದು ಕಾಲೇಜಿನಿಂದ ಹೊರಬರುತ್ತಿದ್ದಂತೆಯೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಯುವತಿಯ ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಯುವತಿಯ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿಗೆ ಮತ್ತೊಬ್ಬ ಸಾಥ್ ನೀಡಿದ್ದು, ಯುವತಿ ಮೇಲೆ ಗುಂಡು ಹಾರಿಸಿರುವುದಾಗಿ ಬಲ್ಲಬ್ಗರ್ ಎಸಿಪಿ ಜೈವೀರ್ ಸಿಂಗ್ ರಾತಿ ತಿಳಿಸಿದ್ದಾರೆ.
ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾಗಿದ್ದಾರೆ. ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ ಎಂದು ಎಸಿಪಿ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಬಂಧಿತ ಮಿವಾತ್ ಸಿವಾಸಿಯಾಗಿದ್ದಾನೆ. ಯುವತಿ ಹಾಗೂ ಓರ್ವ ಆರೋಪಿ ಪರಿಚಯಸ್ಥರು ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಎಸಿಪಿ ಹೇಳಿದ್ದಾರೆ.