ಮಂಡ್ಯ: ಬಡವರ ಹಸಿವು ನೀಗಿಸಲು ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತಿದೆ. ಸಾಮಾನ್ಯವಾಗಿ ಸೊಸೈಟಿಗಳು ಕಳಪೆ ಹಾಗೂ ಹುಳು ಬಂದ ಅಕ್ಕಿ ನೀಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಪ್ಲಾಸ್ಟಿಕ್ ಮತ್ತು ರಬ್ಬರ್ ಉಚಿತ ಅಕ್ಕಿ ಜೊತೆ ಮಿಶ್ರಣವಾಗಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯದ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಬಹುತೇಕ ಜನ ಕೂಲಿಕಾರ್ಮಿಕರು ಇದ್ದಾರೆ. ಒಂದೊತ್ತಿನ ಊಟಕ್ಕೆ ಸರ್ಕಾರ ನೀಡುವ ಉಚಿತ ಪಡಿತರವನ್ನೇ ನಂಬಿಕೊಂಡಿದ್ದಾರೆ. ಆದರೆ ಅವರ ಜೀವಕ್ಕೆ ಆಪತ್ತು ಎದುರು ಮಾಡಿದೆ. ಚಿಕ್ಕರಸಿನಕೆರೆ ಸೊಸೈಟಿಯಿಂದ ತಂದ ಪಡಿತರ ಅಕ್ಕಿಯಲ್ಲಿ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿದ್ದು, ಅಕ್ಕಿ ಬೇಯಿಸಿದಾಗ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದುಬಂದಿದೆ.
ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಚಿಕ್ಕರಸಿನಕೆರೆ ಸೊಸೈಟಿಯಿಂದ ರೇಷನ್ ತಂದಿದ್ದರು. ಮನೆಗೆ ಬಂದು ಚೀಲ ಬಿಚ್ಚಿ ನೋಡಿದಾಗ ಅಕ್ಕಿಯ ಜೊತೆ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿರೋದು ಕಂಡು ಬಂದಿದೆ. ಇದನ್ನು ಬೇಯಿಸಿದಾಗ ಜನರಿಗೆ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದಿದೆ.
ಈ ಹಳದಿ ಕಾಳುಗಳನ್ನು ನೀರಿನಲ್ಲಿ ನೆನೆಸಿದರೆ ಕೆಲವೇ ನಿಮಿಷದಲ್ಲಿ ಬಣ್ಣ ಬಿಟ್ಟುಕೊಳ್ಳುತ್ತಿದೆ. ಈ ಅಕ್ಕಿಯಲ್ಲಿ ಅನ್ನ ಮಾಡಿಕೊಂಡು ತಿಂದರೆ ಆರೋಗ್ಯ ಏನಾಗಬೇಕು? ಪ್ರಾಣಕ್ಕೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಗ್ರಾಮದ ಮಹಿಳೆ ಸುನಿತಾ ಪ್ರಶ್ನಿಸಿದ್ದಾರೆ.
ಬಡವರು ಹಸಿವಿನಿಂದ ಬಳಲಬಾರದು. ಹೊಟ್ಟೆ ತುಂಬಾ ಊಟ ಮಾಡಬೇಕು ಎಂಬ ಕಾರಣದಿಂದ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಅಕ್ಕಿಯಲ್ಲಿ ವಿಷವಾಗಿ ಬದಲಾಗುವ ಪ್ಲಾಸ್ಟಿಕ್ ಹಾಗೂ ರಬ್ಬರ್ ಅಂಶಗಳು ಸೇರಿರುವುದು ಜನರನ್ನು ಆತಂಕಕ್ಕೆ ದೂಡಿದೆ.