ನನ್ನ ಅಪ್ಪನನ್ನು ಬಿಟ್ಟು ಬಿಡಿ – ಐದರ ಬಾಲಕನ ಕಣ್ಣೀರ ಅಭಿನಯಕ್ಕೆ ಚಪ್ಪಾಳೆ ಮೇಲೆ ಚಪ್ಪಾಳೆ

Public TV
3 Min Read
SPB 3

– ನಿಜವಾಗಿ ಅತ್ತರೂ ಜನ ಅಭಿನಯ ಅಂದುಕೊಂಡಿದ್ರು
– ಜಗವೇ ನನ್ನ ಕರ್ಮಭೂಮಿ’ ಐದರ ಬಾಲಕನ ಗಟ್ಟಿ ನಿರ್ಧಾರ

ಬಾಲು ನಮ್ಮ ಜೊತೆ ಇದ್ದಾರೆ. ನಮ್ಮ ಜೊತೆಯೇ ಇರುತ್ತಾರೆ. ಇನ್ನು ನೂರಾರು ವರ್ಷ ಅವರೇ ನಮ್ಮನ್ನು ಬೆಳೆಸುತ್ತಾರೆ. ಹೀಗಂತ ಲಕ್ಷಾಂತರ ಸಂಗೀತ ಪ್ರೇಮಿಗಳು ನಂಬಿದ್ದರು. ಆದರೆ ಆ ನಂಬಿಕೆ ಇದೀಗ ಹುಸಿಯಾಗಿದ್ದು, ಗಾನಗಂಧರ್ವ ಬಾರದ ಲೋಕಕ್ಕೆ ತೆರಳಿದ್ದಾರೆ.

ಹೌದು. ಇಂದು ಮಧ್ಯಾಹ್ನ 1.04ರ ಸುಮಾರಿಗೆ ಗಾನ ಗಾರುಡಿಗ ಎಸ್‍ಪಿಬಿ ಅವರು ಆಸ್ಪತ್ರೆಯಲ್ಲಿಯೇ ವಿಧಿವಶರಾಗಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಬಾಲು ಕೇವಲ ಐದು ವರ್ಷ ಇದ್ದಾಗಲೇ ಸಂಗೀತವನ್ನೇ ಉಸಿರಾಗಿಸಿಕೊಳ್ಳಲು ನಿರ್ಧರಿಸಿದ್ದರು.

sp balasubramaniam critical condition

ಬಾಲ್ಯ, ಒಬ್ಬೊಬ್ಬರನ್ನು ಒಂದೊಂದು ರೀತಿ ಬೆಳೆಸುತ್ತದೆ. ಮನೆಯಲ್ಲಿಯ ಸಂಸ್ಕಾರವೇ ಒಬ್ಬ ವ್ಯಕ್ತಿಯನ್ನು ಮುನ್ನಡೆಸುತ್ತದೆ. ಆ ಕುಟುಂಬದ ಆಚಾರ-ವಿಚಾರ, ಕಷ್ಟ- ಸುಖ, ನೋವು ನಲಿವುಗಳೇ ಆ ಮನೆಯ ಮಕ್ಕಳನ್ನು ಒಂದು ದಾರಿಗೆ ತರುತ್ತದೆ. ಯಾಕೆಂದರೆ ಆ ಸಂಸ್ಕಾರದ ಶಕ್ತಿಯೇ ಹಾಗಿರುತ್ತದೆ. ಅದೇ ರೀತಿ ಬಾಲು ಕೂಡ ಸುಸಂಸ್ಕøತ ಮನೆಯಲ್ಲಿ ಹುಟ್ಟಿದವರು. ಅಪ್ಪ ಹರಿಕತೆ ಮಾಡುತ್ತಿದ್ದರು. ಆಗಾಗ ನಾಟಕಗಳಿಗೂ ಬಣ್ಣ ಹಚ್ಚುತ್ತಿದ್ದರು. ಅದೆಲ್ಲಾ ಬಾಲು ಮನಸಲ್ಲಿ ಅಚ್ಚಳಿಯದೇ ಕುಳಿತುಬಿಟ್ಟಿದ್ದು, ಸಂಗೀತಕ್ಕೆ ಬುನಾದಿ ಹಾಕಿತು.

SP Balasubrahmanyam

ಹಲವಾರು ದಶಕಗಳ ಹಿಂದೆ ಹರಿಕತೆ ಮಾಡುವುದೆಂದರೆ ಅದನ್ನು ಪುಣ್ಯದ ಕೆಲಸ ಎಂದು ತಿಳಿಯುತ್ತಿದ್ದರು. ಆದರೆ ಆಗಿನ ಕಾಲವೇ ಬೇರೆ, ಈಗಿನ ಕಾಲವೇ ಬೇರೆ. ಹರಿಕತೆಯನ್ನು ಕೇಳಲೆಂದೇ ಜನರು ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದರು. ಆಗ ಮನರಂಜನೆ ಎನ್ನುವುದು ಈಗಿನಷ್ಟು ಬಿಡಿ, ನಲವತ್ತು ವರ್ಷ ಹಿಂದೆ ಇದ್ದಷ್ಟೂ ಇರಲಿಲ್ಲ. ಇಂತ ಹೊತ್ತಿನಲ್ಲಿ ಅದೊಂದು ದಿನ ಬಾಲು ತಂದೆ ನಾಟಕ ಮಾಡಲು ಹೋಗಿದ್ದರು. ಅಪ್ಪ ರಾಮದಾಸನ ಪಾತ್ರ ಮಾಡಿದರೆ, ಐದರ ಬಾಲು ರಘುರಾಮನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ

Balasubrahmanyam

ಮೊದಲೇ ಐದರ ಕೂಸಾಗಿದ್ದ ಬಾಲು ನಡು ರಾತ್ರಿಯಲ್ಲಿ ನಾಟಕ ಮಾಡಲು ಸಾಧ್ಯವೆ? ಅದೂ ಬಣ್ಣ ಹಚ್ಚಿಕೊಂಡು, ಡೈಲಾಗ್ ನೆನೆಪಿಟ್ಟುಕೊಂಡು ವೇದಿಕೆ ಮೇಲೆ ಜನರನ್ನು ರಂಜಿಸಲು ಆಗುತ್ತಾ? ಇಲ್ಲ ಇದ್ಯಾವುದೂ ಆಗ ಯಾರಿಗೂ ನೆನಪಿಗೆ ಬರುತ್ತಿರಲಿಲ್ಲ. ಯಾಕೆಂದರೆ ಅದೇ ನಮ್ಮ ಕಾಯಕ. ಅದನ್ನು ನಾವು ಎಷ್ಟೇ ಕಷ್ಟಪಟ್ಟಾದರೂ ಸರಿ ಮಾಡಲೇಬೇಕು. ಹೀಗೊಂದು ಅಲಿಖಿತ ನಿಯಮವನ್ನು ಬಾಲು ತಂದೆ ಹಾಕಿಕೊಂಡಿದ್ದರು. ಆಗಲೇ ಅದೊಂದು ಘಟನೆ ನಡೆದಿತ್ತು. ಮೊದಲ ದೃಶ್ಯ ಮುಗಿಸಿ ಬಾಲು ಮಲಗಿದ್ದರು. ಮತ್ತೆ ಕೊನೆಯ ದೃಶ್ಯದಲ್ಲಿ ವೇದಿಕೆ ಮೇಲೆ ಬರಬೇಕಿತ್ತು. ಆಗ ಬಾಲುವನ್ನು ಎಬ್ಬಿಸಿ ಸ್ಟೇಜ್ ಮೇಲೆ ಬಿಟ್ಟಿದ್ದಾರೆ. ಬಾಲಕ ಬಾಲು ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿತ್ತು.

spb sp balasubrahmanyam

ನಿದ್ದೆ ಕಣ್ಣಿನಲ್ಲಿ ಬಾಲಕ ಬಾಲುಗೆ ಏನು ಮಾಡುತ್ತಿದ್ದೇನೆಂದು ತಿಳಿದಿಲ್ಲ. ನನ್ನ ಅಪ್ಪನನ್ನು ಬಿಟ್ಟು ಬಿಡಿ ಎಂದು ಅಳಲು ಶುರು ಮಾಡಿದ್ದಾನೆ. ಅದು ನಾಟಕದ ವೇದಿಕೆ ಎನ್ನುವುದನ್ನು ಮರೆತಿದ್ದಾನೆ. ಆದರೆ ಅಸಲಿಗೆ ಜನರು, ನಿಜಕ್ಕೂ ಬಾಲಕ ಪಾತ್ರ ಮಾಡುತ್ತಿದ್ದಾನೆ ಅಂತ ಅಂದುಕೊಂಡಿದ್ದರು. ಅಷ್ಟೊಂದು ಇನ್‍ವಾಲ್ವಮೆಂಟ್ ತೋರಿಸುತ್ತಿದ್ದಾನೆ ಎಂದೇ ನಂಬಿಬಿಟ್ಟಿದ್ದಾರೆ. ಚಪ್ಪಾಳೆ ಮೇಲೆ ಚಪ್ಪಾಳೆ ಬೀಳುತ್ತಿವೆ. ಬಾಲು ಮಾತ್ರ ಅದೇ ರಾಗ ಅದೇ ಹಾಡು…`ನನ್ನ ಅಪ್ಪನನ್ನು ಬಿಟ್ಟು ಬಿಡಿ…ಬಿಟ್ಟು ಬಿಡಿ…’ ಎಂದು ರೋಧಿಸುತ್ತಿದ್ದಾರೆ.

SPB 1

ಕೆಲವೇ ಕೆಲವು ನಿಮಿಷದಲ್ಲಿ ಬಾಲುಗೆ ವಾಸ್ತವತೆ ಗೊತ್ತಾಗಿದೆ. ನಾನು ನಾಟಕ ಮಾಡುತ್ತಿದ್ದೇನೆ, ಹೀಗೆಲ್ಲಾ ಮಾಡಬಾರದು..ನಾನು ಎಲ್ಲೋ ತಪ್ಪು ಮಾಡಿದ್ದೇನೆ…ಇದೆಲ್ಲ ಕೆಲವೇ ಕೆಲವು ಕ್ಷಣಗಳ ಅಂತರದಲ್ಲಿ ಅವರ ಎದೆಯಲ್ಲಿ ಮಿಂಚಿ ಹೋಗಿದೆ. ಅದ್ಯಾವ ದೈವ ಸಾಕ್ಷಾತ್ಕಾರವೊ, ಅದ್ಯಾವ ಸರಸ್ವರತಿ ಕೃಪೆಯೇ…ಕೇವಲ ಐದೇ ಐದು ವರ್ಷ ಬಾಲು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮಪ್ಪ ನಮಗಾಗಿ ಇಷ್ಟೆಲ್ಲಾ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರಲ್ಲ…ಅವರಿಗಾಗಿ ನಾನೇನಾದರೂ ಮಾಢಬೇಕು. ಸುಮ್ಮನೆ ಕೂತರೆ ಆಗಲ್ಲ ಎನ್ನುವ ಜ್ಞಾನೋದಯ ಆಗಿದೆ.

146082 jcfafcmbjy 1597549335

ಆ ಕ್ಷಣ…ಆ ತಲ್ಲಣದ ದಿನ.. ಆ ಅನಿರ್ವಚನೀಯ ಅನುಭವ…ಎಲ್ಲವೂ ಸೇರಿಕೊಂಡು ಐದರ ಬಾಲಕನ ಮನಸನ್ನು ಕದಡಿಬಿಟ್ಟಿತು. ನಾವು ಮನೆಯಲ್ಲಿ ಆರಾಮಾಗಿ ಊಟ ಮಾಡುತ್ತೇವೆ ನಿಜ. ಅನ್ನವನ್ನು ಹೊತ್ತು ಹೊತ್ತಿಗೆ ತಿನ್ನುತ್ತೇವೆ ಸತ್ಯ. ಆದರೆ ಅದರ ಹಿಂದೆ ನಮ್ಮ ತಂದೆ ಇಷ್ಟೊಂದು ಕಷ್ಟ ಪಡುತ್ತಾರಲ್ಲ ? ಅದರ ಬಗ್ಗೆ ನಂಗ್ಯಾಕೆ ಈ ಕ್ಷಣವೂ ಹೊಳೆಯಲಿಲ್ಲ. ನಿಜಕ್ಕೂ ನಾನು ಅಪ್ಪನಿಗೆ ಸಹಾಯ ಮಾಡಬೇಕು. ಹೇಗಾದರೂ ಮಾಡಿ ಸಂಗೀತ ಕಲಿಯಲೇಬೇಕು ಎಂಬ ಛಲ ಹುಟ್ಟಿಕೊಂಡಿತ್ತು.

spb1200 2

ಆರಂಭದ ದಿನಗಳಲ್ಲಿ ಬಾಲು ಎಂಜಿನಿಯರ್ ಆಗಬೇಕೆಂದಿದ್ದರು. 250 ರೂ. ಸಂಬಳ, ಓಡಾಡಲು ಜೀಪು. ಮತ್ತು ಆಫೀಸರ್ ಹುದ್ದೆ. ಇನ್ನೇನು ಬೇಕು ನನ್ನ ನೆಮ್ಮದಿಯ ದಿನಗಳಿಗಾಗಿ ಎಂದು ಯೋಚನೆ ಮಾಡಿದ್ದವರು ಸಡನ್ನಾಗಿ ಸಂಗೀತವನ್ನೇ ಉಸಿರಾಗಿಸಿಕೊಳ್ಳಲು ಮನಸು ಮಾಡಿದರು. ಹೇಗಾದರೂ ಮಾಡಿ ಸಂಗೀತ ಕಲಿಯಬೇಕು. ಅದರಲ್ಲಿ ಏನಾದರೂ ಸಾಧಿಸಬೇಕು. ಅದರಲ್ಲೇ ನನ್ನ ಭಾಗ್ಯವನ್ನು ಕಂಡುಕೊಳ್ಳಬೇಕು. ಆ ಗಳಿಗೆ ಹುಟ್ಟಿದ ಆ ನಿರ್ಧಾರ ಇಂದು ನಮ್ಮ ನಡುವೆ ಬಾಲು ಎನ್ನುವ ಸ್ವರ ಸಾಮ್ರಾಟನನ್ನು ಮೆರವಣಿಗೆ ಹೊರಡಿಸಿತು.

Share This Article
Leave a Comment

Leave a Reply

Your email address will not be published. Required fields are marked *