ಬೆಳಗಾವಿ: ಮಹಾಮಾರಿ ಕೊರೊನಾ, ಲಾಕ್‍ಡೌನ್, ಸೀಲ್‍ಡೌನ್, ಕ್ವಾರಂಟೈನ್ ಕಳೆದ ಏಳೆಂಟು ತಿಂಗಳಿಂದ ಈ ಎಲ್ಲಾ ಪದಗಳನ್ನು ಕೇಳಿ ಸುಸ್ತಾಗಿದ್ದ ಜನತೆ ಈಗ ರಿಲ್ಯಾಕ್ಸ್ ಮೂಡಿಗೆ ಬರುತ್ತಿದ್ದಾರೆ. ಪ್ರವಾಸಿತಾಣಗಳತ್ತ ಜನ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಪಾತಗಳು ಹಾಲಿನ ನೊರೆಯಂತೆ ಧುಮ್ಮುಕ್ಕುತ್ತಿವೆ. ಅದರಲ್ಲೂ ಚಿಕಲೆ ಚೆಲುವೆನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಒಂದೆಡೆ ಪಶ್ಚಿಮ ಘಟ್ಟ ಪ್ರದೇಶದ ಅರಣ್ಯದಲ್ಲಿ ಮಧ್ಯೆ ದಟ್ಟವಾಗಿ ಆವರಿಸಿರುವ ಮಂಜು. ಒಂದು ಕ್ಷಣ ಮಂಜು, ಮತ್ತೊಂದು ಕ್ಷಣ ಬಿಸಿಲು, ಮಳೆ, ಭೂತಾಯಿ ಮಡಿಲಿಗೆ ಮುಗಿಲು ಬಂದು ಮುತ್ತಿಕ್ಕುತ್ತಿರುವ ರಮಣೀಯ ದೃಶ್ಯ. ಮತ್ತೊಂದೆಡೆ ಸಹ್ಯಾದ್ರಿ ಬೆಟ್ಟದ ಮೇಲಿನಿಂದ ನೀರು ಹರಿದು ಹಾಲಿನ ನೊರೆಯಂತೆ ಪ್ರಪಾತಕ್ಕೆ ಧುಮ್ಮುಕ್ಕುತ್ತಿದ್ದು, ಪ್ರಕೃತಿ ಮಾತೆಯ ಈ ಚೆಲುವನ್ನು ಸವಿಯಲು ಯುವಕ-ಯುವತಿಯರ ತಂಡವೇ ಬರುತ್ತಿದೆ. ಸೆಲ್ಫಿಗೆ ಪೋಸ್ ಕೊಟ್ಟು ಮೋಜು-ಮಸ್ತಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ ಬಳಿ ಈ ಎಲ್ಲಾ ಕಲರ್‍ಫುಲ್ ದೃಶ್ಯಗಳು ಕಂಡು ಬಂದಿದೆ.
ಹೌದು. ಬೆಳಗಾವಿಯಿಂದ 41 ಕಿಲೋಮೀಟರ್ ದೂರ ಇರುವ ಚಿಕಲೆ ಗ್ರಾಮದಿಂದ ಎರಡು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋದರೆ ನಮಗೆ ಈ ಚೆಲುವೆಯ ದರ್ಶನವಾಗುತ್ತೆ. ಮಲಪ್ರಭಾ ನದಿ ಉಗಮ ಸ್ಥಾನ ಕಣಕುಂಬಿ ಅರಣ್ಯ ವ್ಯಾಪ್ತಿಗೆ ಬರುವ ಈ ಚಿಕಲೆ ಚೆಲುವೆಯನ್ನು ನೋಡಲು ಎರಡು ಕಣ್ಣು ಸಾಲದು. ಬೆಟ್ಟಗಳ ಮೇಲಿಂದ ಹರಿದು ಬರುವ ನೀರು ಚಿಕಲೆ ಹೊರವಲಯದಲ್ಲಿ ಜಲಪಾತವಾಗಿ ಜಲವೈಭವವನ್ನೇ ಸೃಷ್ಟಿಸಿದ್ದು ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.
ಕಳೆದ ಏಳೆಂಟು ತಿಂಗಳಿಂದ ಕೊರೊನಾ ಲಾಕ್‍ಡೌನ್ ಎಂದು ಬೇಸತ್ತಿದ್ದ ಜನರು ಕುಟುಂಬ ಸಮೇತರಾಗಿ ಚಿಕಲೆ ಚೆಲುವೆಯನ್ನು ನೋಡಲು ಹೆಜ್ಜೆ ಹಾಕುತ್ತಿದ್ದಾರೆ. ತಂಡೋಪತಂಡವಾಗಿ ಚಿಕಲೆ ಗ್ರಾಮಕ್ಕೆ ಆಗಮಿಸುತ್ತಿರುವ ಯುವಕ- ಯುವತಿಯರು ಕಾಲ್ನಡಿಗೆಯಲ್ಲಿ ಪ್ರಕೃತಿಯ ಸೊಬಗನ್ನು ಎಂಜಾಯ್ ಮಾಡ್ತಾ ಫಾಲ್ಸ್ ಬಳಿ ಬಂದು ಸೆಲ್ಫಿಗೆ ಪೋಸ್ ಕೊಡ್ತಿದ್ದಾರೆ. ಮಹಾಮಾರಿ ಕೊರೊನಾ ಬಂದು ಲಾಕ್‍ಡೌನ್ ಆದ ಬಳಿಕ ಎಲ್ಲಿಯೂ ಔಟಿಂಗ್ ಹೋಗಿರಲಿಲ್ಲ. ಹೀಗಾಗಿ ಕುಟುಂಬ ಸಮೇತ ಔಟಿಂಗ್ ಹೋಗೋಣ ಅಂತ ಚಿಕಲೆ ಫಾಲ್ಸ್‍ಗೆ ಬಂದಿದ್ದೇವೆ. ಫಾಲ್ಸ್ ಸುತ್ತ ಯಾವುದೇ ಸೇಫ್ಟಿ ಇಲ್ಲ ರಸ್ತೆ ಕೂಡ ಸರಿಯಾಗಿಲ್ಲ. ಹೀಗಾಗಿ ಸ್ವಲ್ಪ ತೊಂದರೆ ಆಗುತ್ತಿದ್ದು ಅದನ್ನ ಸರಿಪಡಿಸಿ ಒಂದೊಳ್ಳೆ ಪ್ರವಾಸಿತಾಣವನ್ನಾಗಿ ಮಾಡಬೇಕು ಅಂತ ಪ್ರವಾಸಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಜಲಪಾತಗಳಲ್ಲಿ ಜಲವೈಭವವೇ ಸೃಷ್ಟಿಯಾಗಿದ್ದು ಖಾನಾಪುರ ತಾಲೂಕಿನ ಚಿಕಲೆ ಗ್ರಾಮವನ್ನು ಕರ್ನಾಟಕದ ಕಾಶ್ಮೀರ ಅಂತಾನೇ ಪ್ರವಾಸಿಗರು ಬಿರುದು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಮಹಾಮಾರಿ ಕೊರೊನಾ ಭಯ ದೂರ ಮಾಡಿಕೊಂಡು ಜನರು ಪ್ರವಾಸಿತಾಣಗಳತ್ತ ಹೆಜ್ಜೆ ಹಾಕುತ್ತಿರೋದಂತು ಸುಳ್ಳಲ್ಲ. ಕಳಸಾಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಫಾಲ್ಸ್ ಗೆ ನೀವು ಒಮ್ಮೆ ಭೇಟಿ ನೀಡಿ ಜಲಪಾತದ ವೈಭವವನ್ನ ಕಣ್ತುಂಬಿಕೊಳ್ಳಿ.