-ಭಾಗಮಂಡಲದಲ್ಲಿ ಮತ್ತೆ ಭೂ ಕುಸಿತದ ಆತಂಕ
ಉಡುಪಿ/ಕೊಡಗು: ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇತ್ತ ಕೊಡಗು ಜಿಲ್ಲೆಯ ಭಾಗಮಂಡಲದ ಕೋಳಿಕಾಡು ಪೈಸಾರಿಯ ಜನಗಳಿಗೆ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. 40 ವರ್ಷಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುವರ್ಣಾ ನದಿ ಮತ್ತು ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತನ್ಮ ಮಟ್ಟವನ್ನು ಕಡಿಮೆ ಮಾಡುತ್ತಿಲ್ಲ. ಉಡುಪಿ ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಉಡುಪಿ ನಗರ 24 ಗಂಟೆ ಮುಳುಗಿಹೋಗಿತ್ತು, ಇಂದು ರಸ್ತೆಗಳಿಂದ ನೀರು ಇಳಿದಿದೆ.
ಕಾಪು ತಾಲೂಕಿನ ಪಾಪನಾಶಿನಿ ನದಿಯ ಮಟ್ಟ ಕಡಿಮೆಯಾಗಿಲ್ಲ. ಸುತ್ತಮುತ್ತಲ ನೂರಾರು ಮನೆಗಳಿಗೆ ನುಗ್ಗಿದ ನೀರು ಇಳಿದಿಲ್ಲ. ಸುಮಾರು 25ರಿಂದ 30 ಮನೆಗಳ ಜನರು ದೋಣಿಗಳಲ್ಲಿ ಓಡಾಟವನ್ನು ಮಾಡುತ್ತಿದ್ದಾರೆ. ತಮ್ಮ ಸಾಕುಪ್ರಾಣಿಗಳು ಅಗತ್ಯ ವಸ್ತುಗಳನ್ನು ಎತ್ತಿಕೊಂಡು ಎತ್ತರ ಪ್ರದೇಶಗಳಿಗೆ ಸ್ಥಳಾಂತರಗೊಂಡವರು ನಿಧಾನಕ್ಕೆ ಮನೆಗಳತ ಮುಖ ಮಾಡುತ್ತಿದ್ದಾರೆ.
ಮಟ್ಟು ಹಳೆ ಬ್ರಿಜ್ ಸಂಪೂರ್ಣ ಮುಳುಗಡೆಯಾಗಿತ್ತು. ಇಂದು ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಟ್ಟು ಹೊಳೆ ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಜನವಸತಿ ಪ್ರದೇಶಗಳು ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸವಾರರು ಅಂದಾಜಿಗೆ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ. ಮಟ್ಟು, ಉದ್ಯಾವರ ವ್ಯಾಪ್ತಿಯಲ್ಲಿ ಮೀನುಗಾರರ ಮನೆಗಳು ಮುಳುಗಡೆಯಾಗಿದ್ದು ಇನ್ನೆರಡು ದಿನ ಬಿಟ್ಟು ನೀರು ಇಳಿಮುಖವಾಗಬಹುದು. ಕುದ್ರು ಪ್ರದೇಶ ಮುಳುಗಡೆಯಾಗಿದ್ದು, ಸ್ಥಳೀಯ ಯುವಕರು ನಾಡ ದೋಣಿಗಳನ್ನು ಬಳಸಿ ಜನರನ್ನು ಇತರ ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.
ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಕೋಳಿಕಾಡಿನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಕೋಳಿಕಾಡು ಪ್ರದೇಶದಲ್ಲಿ ಹೊಸದಾಗಿ ಹೊಳೆ ಸೃಷ್ಟಿಯಾಗಿದನ್ನು ಕಂಡು ಜನರು ಭಯಭೀತರಾಗಿದ್ದಾರೆ.
ಸತೀಶ್ ಎಂಬವರು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್ ಮಾಡಲು ಬೆಟ್ಟ ಕೊರೆದಿದ್ದರಿಂದ ಆ ಸ್ಥಳದಲ್ಲಿ ಆಗಸ್ಟ್ ತಿಂಗಳಲ್ಲಿ ಭೂಕುಸಿತವಾಗಿತ್ತು. ಅದು ಕೋಳಿಕಾಡು ಗ್ರಾಮದ ಮೂಲಕ ಗುಡ್ಡದ ಮಣ್ಣು ಕುಸಿದು ಹೋಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಭೂಕುಸಿತ ಆಗುವುದೆಂಬ ಆತಂಕ ಮನೆ ಮಾಡಿದೆ. ಹೊಳೆಯಂತೆ ಹರಿಯುತ್ತಿರುವ ನೀರು ಕಂಡು ಜನರು ಮನೆ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಭೂಕುಸಿತವಾದ ಮಣ್ಣನ್ನು ತೆರವು ಮಾಡಿ ತೋಡಿನಲ್ಲಿ ಸರಿಯಾಗಿ ನೀರು ಹರಿಯುವಂತೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ಒಂದು ತಿಂಗಳಾದರೂ ಮಣ್ಣು ತೆರವು ಮಾಡದೆ ಮತ್ತೆ ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಜನರು ಅಳಲು ತೋಡಿಕೊಳ್ಳುತಿದ್ದಾರೆ.