– ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಚಿಕ್ಕಮಗಳೂರು: 26 ವರ್ಷದ ಜಿಮ್ ಟ್ರೈನರ್ ಜಿಮ್‍ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಮೃತನನ್ನ ಜಯಪುರ ಸಮೀಪದ ದೂಬ್ಳ ಗ್ರಾಮದ ಸುನಿಲ್ ಎಂದು ಗುರುತಿಸಲಾಗಿದೆ. ಮೃತ ಸುನಿಲ್ ಜಯಪುರದಲ್ಲಿ ಜಿಮ್ ಇಟ್ಟುಕೊಂಡು, 30 ರಿಂದ 40 ಜನ ಯುವಕರಿಗೆ ಜಿಮ್ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದ. ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಿಮ್ ಕ್ಲೋಸ್ ಮಾಡಲಾಗಿತ್ತು. ಆದರೆ ಸುನೀಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೇ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಲು ಜಿಮ್ ಟ್ರೈನರ್ ಸುನಿಲ್ ಕಳೆದ ಮೂರು ತಿಂಗಳಿಂದ ಆಟೋ ಓಡಿಸುತ್ತಿದ್ದನು. ಆರ್ಥಿಕ ನಷ್ಟ ಹಾಗೂ ಕಷ್ಟದಿಂದ ಮಾನಸಿಕವಾಗಿ ಕುಗ್ಗಿದ್ದರಿಂದ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ಜಿಮ್ ಟ್ರೈನರ್ ಸುನಿಲ್ ಆರೋಗ್ಯವಾಗಿ ಕಟ್ಟುಮಸ್ತಾಗಿದ್ದ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದೇಹದಾಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು. ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಮಿಸ್ಟರ್ ಕೊಪ್ಪ ಎಂಬ ಕೀರ್ತಿಗೂ ಪಾತ್ರನಾಗಿದ್ದನು. ಇದೀಗ 26ನೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿರೋದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಘಟನೆ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.