ಕೊರೊನಾ ಸಮಯದಲ್ಲೂ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿದೆ ರಕ್ತದಾನಿಗಳ ತಂಡ

Public TV
2 Min Read
glb blood bank

– ಕೊರೊನಾ ಸಂದರ್ಭದಲ್ಲಿ ರಕ್ತ ಸಿಗದ್ದನ್ನು ಮನಗಂಡು ಕ್ಯಾಂಪ್ ಆಯೋಜನೆ
– ರಕ್ತದ ಜೊತೆ ಪ್ಲಾಸ್ಮಾ ಸಹ ಸಂಗ್ರಹ

ಕಲಬುರಗಿ: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಪರಿಸ್ಥಿತಿ ಅರಿತ ಯುವಕರ ತಂಡ ತಮ್ಮದೇ ಗುಂಪು ಕಟ್ಟಿಕೊಂಡು ರಕ್ತ ಸಂಗ್ರಹಕ್ಕೆ ನಿಂತಿದ್ದು, ಕ್ಯಾಂಪ್ ತೆರೆಯುವ ಮೂಲಕ ರಕ್ತ ಸಂಗ್ರಹಿಸುತ್ತಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿತರಿಗೆ ಸಹಾಯವಾಗಲು ಪ್ಲಾಸ್ಮಾ ಸಹ ಸಂಗ್ರಹಿಸುತ್ತಿದ್ದಾರೆ.

CORONA VIRUS 7

ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿದ ಬಳಿಕ ಜಿಲ್ಲೆಯಲ್ಲಿ ಹಲವು ರಕ್ತ ದಾನಿಗಳು ತುರ್ತು ಸಮಯದಲ್ಲಿ ರಕ್ತ ದಾನ ಮಾಡಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ತುರ್ತು ಸಮಯಕ್ಕೆ ರಕ್ತ ಸಿಗದೆ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ. ಇದನ್ನು ಅರಿತ ಕಲಬುರಗಿಯ ಶರಣು ಪಪ್ಪಾ ನೇತೃತ್ವದ ಜೀ 99 ಹಾಗೂ ಜೀ 55 ಸದಸ್ಯರ ತಂಡ ಜಿಲ್ಲೆಯ ಹಲವೆಡೆ ಬ್ಲಡ್ ಕ್ಯಾಂಪ್ ಆಯೋಜಿಸಿದೆ. ಈ ಮೂಲಕ ಕೊರೊನಾದಂತಹ ಕಷ್ಟ ಕಾಲದಲ್ಲಿ ಹಣ ನೀಡಿದರೂ ರೋಗಿಗಳಿಗೆ ರಕ್ತ ಸಿಗದ ಸಮಯದಲ್ಲಿ ಅವರ ನೇರವಿಗೆ ನಿಂತಿದೆ. ಅಪಘಾತ, ಡೆಲಿವರಿಯಂತಹ ತುರ್ತು ಸಮಯದಲ್ಲಿ ರಕ್ತದ ಅವಶ್ಯವಿರುವವರ ನೇರವಿಗೆ ಧಾವಿಸಿದ್ದಾರೆ.

blood

ಸದ್ಯ ಈ ತಂಡದಲ್ಲಿ ರಕ್ತ ದಾನ ಮಾಡಲು 300ಕ್ಕೂ ಅಧಿಕ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗ ನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಿಗೆ ಪ್ಲಾಸ್ಮಾ ಚಿಕಿತ್ಸೆಯ ಅವಶ್ಯವಿದ್ದರೆ ಅಂತಹವರಿಗೆ ಪ್ಲಾಸ್ಮಾ ವ್ಯವಸ್ಥೆಯನ್ನು ಸಹ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಂದ ಪ್ಲಾಸ್ಮಾ ದಾನವಾಗಿ ಪಡೆಯುತ್ತಿದ್ದು, ಈಗಾಗಲೇ ಕಲಬುರಗಿ ಪೊಲೀಸ್ ಪೇದೆ ಜಗದೀಶ್ ಅವರಿಂದ ಪ್ಲಾಸ್ಮಾ ಪಡೆದು, ಮತ್ತೊಬ್ಬರಿಗೆ ನೀಡುವ ಮೂಲಕ ತಂಡ ಒಂದು ಜೀವ ಉಳಿಸಿದೆ.

Plasma Therapy 2

ಕೊರೊನಾದಂತಹ ಸಮಯದಲ್ಲಿ ರಕ್ತ ನೀಡಿದರೆ ಸೋಂಕು ಬರುತ್ತೆ ಎಂಬ ಭಯದಲ್ಲಿರುವ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಜೀ 99 ತಂಡದ ಸದಸ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾ ವಾರಿಯರ್ಸ್ ಗಳಂತೆ ಇವರು ಸಹ ಜನರ ಜೀವ ಉಳಿಸಲು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *