ಯಾದಗಿರಿ: ಮಹಾರಾಷ್ಟ್ರ ಮತ್ತು ಬೆಂಗಳೂರು ಕಂಟಕದಿಂದ ಕೊರೊನಾದ ಹಾಟ್ ಸ್ಪಾಟ್ ಆಗಿರುವ ಯಾದಗಿರಿ, 1,300 ಕೊರೊನಾ ಪ್ರಕರಣಗಳ ಮೂಲಕ ನಾಗಲೋಟ ಮುಂದುವರೆಸಿದೆ.
ಇಷ್ಟು ದಿನ ಜಿಲ್ಲೆಗೆ ಮರಳಿದ ಕಾರ್ಮಿಕರಿಗೆ ಅಂಟಿಕೊಂಡಿದ್ದ ಕೊರೊನಾ, ಈಗ ಕೊರೊನಾ ವಾರಿಯರ್ಸ್‍ಗೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಕೃಷಿ ಇಲಾಖೆ ಸೇರಿದಂತೆ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳನ್ನು ಕೊರೊನಾ ಟಾರ್ಗೆಟ್ ಮಾಡಿದೆ.
ಶಹಪುರ, ಸುರಪುರ, ಬಿ.ಗುಡಿ ಪೊಲೀಸ್ ಠಾಣೆಗಳಿಗೆ ಕೊರೊನಾ ಕಾಲಿಟ್ಟಿದ್ದು, ಸೀಲ್‍ಡೌನ್ ಮಾಡಲಾಗಿದೆ. ಇದೀಗ ಮತ್ತೆ ಗುರುಮಿಠ್‍ಕಲ್ ಠಾಣೆಗೆ ವಕ್ಕರಿಸಿದೆ. ಠಾಣೆ ಪಿಎಸ್‍ಐ ಸೇರಿದಂತೆ ಒಟ್ಟು 16 ಸಿಬ್ಬಂದಿಗೆ ಕೊರೊನಾ ಧೃಡ ಪಟ್ಟಿದೆ. ಹೀಗಾಗಿ ಠಾಣೆಯನ್ನು ಸೀಲ್ ಮಾಡಿ, ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಾಯಕ್ಕಾಗಿ ಠಾಣೆ ಸಮೀಪದಲ್ಲಿ ದೂರು ಸ್ವೀಕರಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 29,383 ಜನರ ಮಾದರಿ ಪಡೆಯಲಾಗಿದೆ. ಈ ಪೈಕಿ 1,300 ಪಾಸಿಟಿವ್, 27,208 ನೆಗೆಟಿವ್ ಫಲಿತಾಂಶ ಬಂದಿದೆ. ಇನ್ನೂ 274 ಪ್ರಕರಣಗಳು ಸಕ್ರೀಯವಾಗಿದ್ದು, 893 ಜನ ಕೊರೊನಾ ಗೆದ್ದಿದ್ದಾರೆ.