ಬೆಂಗಳೂರು: ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವುದು ತಿಳಿದ ವಿಚಾರ. ಈ ಕುರಿತು ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇನ್ನೂ ಅಚ್ಚರಿಯ ಬೆಳವಣಿಗೆ ಎಂಬಂತೆ ರಮ್ಯಾ ವಿಶೇಷ ಸ್ಟೇಟಸ್‍ಗಳನ್ನು ಹಾಕುತ್ತಿದ್ದಾರೆ. ಇದರಿಂದಾಗಿ ಅವರ ಫಾಲೋವರ್ಸ್ ಅಚ್ಚರಿಗೊಳಗಾಗಿದ್ದು, ಸ್ಯಾಂಡಲ್‍ವುಡ್ ಕ್ವೀನ್ ಆಧ್ಯಾತ್ಮದತ್ತ ವಾಲಿದರಾ ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು ಇತ್ತೀಚೆಗೆ ರಮ್ಯಾ ಅವರು ಆಧ್ಯಾತ್ಮದ ಕುರಿತ ಪೋಸ್ಟ್‍ಗಳನ್ನು ಹಾಕುತ್ತಿದ್ದು, ಇದರಿಂದಾಗಿ ಅವರ ಅಭಿಮಾನಿಗಳಿಗೇ ಆಶ್ಚರ್ಯ ಉಂಟಾಗಿದೆ. ಬಹು ದಿನಗಳ ಬಳಿಕ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ಖುಷಿ ನಡುವೆ ಇದೇನು ಈ ರೀತಿ ಪೋಸ್ಟ್ ಹಾಕುತ್ತಿದಾರೆ ಎಂದು ಆಶ್ಚರ್ಯಕ್ಕೊಳಗಾಗಿದ್ದಾರೆ. ಇಷ್ಟು ದಿನ ಟ್ವಿಟ್ಟರ್ ನಲ್ಲಿ ಆ್ಯಕ್ಟಿವ್ ಆಗಿದ್ದ ರಮ್ಯಾ ಇದೀಗ ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಪೋಸ್ಟ್ ಮಾಡುತ್ತಿದ್ದು, ಅದೂ ಸಹ ಆಧ್ಯಾತ್ಮಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೇರಳದಲ್ಲಿ ಆನೆ ಬಾಯಲ್ಲಿ ಪಟಾಕಿ ಇಟ್ಟು ಸಾಯಿಸಿದ ಪ್ರಕರಣದ ಕುರಿತು ಪೋಸ್ಟ್ ಮಾಡಿದ್ದ ರಮ್ಯಾ, ನಂತರ ಚಿರಂಜೀವಿ ಸರ್ಜಾ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿದ್ದರು. ಇದೀಗ ಆಧ್ಯಾತ್ಮಿಕ ಪೋಸ್ಟ್‍ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೌದ್ಧ ಸನ್ಯಾಸಿ ಲಾಮಾ ಅವರ ಚಾಂಟ್‍ಗಳನ್ನು ಕೇಳುತ್ತಿರುವುದಾಗಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಅಲ್ಲದೆ ಇನ್ನೊಂದು ಸ್ಟೇಟಸ್‍ನಲ್ಲಿ ಅದರ ಅರ್ಥವನ್ನು ಬರೆದಿದ್ದರು.
ಅದೇ ದಿನ ಮತ್ತೊಂದು ಸ್ಟೇಟಸ್ ಹಾಕಿ ಗಾಯತ್ರಿ ಮಂತ್ರ, ಗಾಯತ್ರಿ ಮಂತ್ರದ ಅರ್ಥ, ಅದನ್ನು ಹೇಳುವುದರಿಂದಾಗುವ ಉಪಯೋಗವನ್ನು ವಿವರಿಸಿದ್ದರು. ಈ ಮೂಲಕ ಲಾಕ್‍ಡೌನ್ ಸಮಯದಲ್ಲಿ ರಮ್ಯಾ ಆಧ್ಯಾತ್ಮದತ್ತ ಚಿತ್ತ ಹರಿಸಿರಬಹುದು ಎಂಬುದನ್ನು ಅವರ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳೇ ತೋರಿಸುತ್ತವೆ.
ಇದೀಗ ಅವರು ಸೂರ್ಯನ ಕಿರಣಗಳ ಕುರಿತು ಸ್ಟೇಟಸ್ ಹಾಕಿಕೊಂಡಿದ್ದು, ಕಟ್ಟಡವೊಂದರ ಮೇಲೆ ಹದ್ದು ರೆಕ್ಕೆ ಬಿಚ್ಚಿ ಕುಳಿತಿರುವ ಫೋಟೋ ಹಾಕಿದ್ದಾರೆ. ಫೋಟೋ ಮೇಲೆ ಸಾಲುಗಳನ್ನು ಬರೆದಿರುವ ಅವರು, ಎಲ್ಲರಿಗೂ ಅಲ್ಪ ಪ್ರಮಾಣದಲ್ಲಾದರೂ ಸೂರ್ಯ ಕಿರಣಗಳ ಅವಶ್ಯವಿದೆ ಎಂದಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.