ಚಾಮರಾಜನಗರ: ಭಾನುವಾರದ ಲಾಕ್‍ಡೌನ್ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಬಹುತೇಕ ಸ್ಥಬ್ಧಗೊಂಡಿದೆ. ಅಗತ್ಯ ವಸ್ತು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇಷ್ಟಾದರೂ ಕೆಲವರು ದ್ವಿಚಕ್ರ ವಾಹನಗಳ ಮೂಲಕ ಅನಗತ್ಯವಾಗಿ ಸಂಚರಿಸುತ್ತಿದ್ದರು. ಇಂತಹ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಭಾನುವಾರದ ಲಾಕ್‍ಡೌನ್ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಮರಾಜಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಈ ವೇಳೆ ದ್ಚಿಚಕ್ರ ವಾಹನ ಸವಾರರು ಅನಗತ್ಯವಾಗಿ ಓಡಾಟ ನಡಸುತ್ತಿರುವುದನ್ನು ಕಂಡು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದರು. ಈ ಮೂಲಕ ಕಾರಣವಿಲ್ಲದೆ ಓಡಾಟ ನಡೆಸುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ನಗರದ ವಿವಿಧೆಡೆ ಗಸ್ತು ಮಾಡುತ್ತಿರುವ ಪೊಲೀಸರು, ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಮಹದೇಶ್ವರನ ಸನ್ನಿಧಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರಸಿದ್ಧ ಕೊಳ್ಳೇಗಾಲ ರೇಷ್ಮೆಗೂಡಿನ ಮಾರುಕಟ್ಟೆ ಬಂದ್ ಆಗಿದ್ದು, ರೇಷ್ಮೆ ಗೂಡಿನ ವ್ಯಾಪಾರವೂ ಸ್ಥಗಿತಗೊಂಡಿದೆ. ಜಿಲ್ಲೆಯಾದ್ಯಂತೆ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.