ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ವೆಂಟಿಲೇಟರ್ ಗಳ ಖರೀದಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದೆ.
ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಯಾರಾದ ವೆಂಟಿಲೇಟರ್ ಖರೀದಿಗೆ 2,000 ಕೋಟಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಹಂಚಿಕೆ 1,000 ಕೋಟಿ ಮೀಸಲಿಟ್ಟಿದೆ.
2,000 ಕೋಟಿ ವೆಚ್ಚ ದಲ್ಲಿ ಸುಮಾರು 50,000 ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದ್ದು ಈ ಪೈಕಿ 30,000 ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿಸುತ್ತಿದೆ. ಆಗ್ವಾ ಹೆಲ್ತ್‍ಕೇರ್ 10,000 ಎಎಂಟಿಝಡ್ ಬೇಸಿಕ್ 5,650 ಎಎಂಟಿಝಡ್ ಹೈ ಎಂಡ್ 4,000 ಹಾಗೂ ಅಲೈಡ್ ಮೆಡಿಕಲ್ ನಿಂದ 350 ವೆಂಟಿಲೇಟರ್ ಖರೀದಿಯಾಗಲಿದೆ.
ಈವರೆಗೂ 2,923 ವೆಂಟಿಲೇಟರ್ ತಯಾರಿಸಿದ್ದು 1340 ವೆಂಟಿಲೇಟರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಹಂಚಿಕೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತ್ 175, ಬಿಹಾರ್ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಿದ್ದು ಮುಂದಿನ ಹಂತದಲ್ಲಿ 14,000 ವೆಂಟಿಲೇಟರ್ ಹಂಚಿಕೆಯಾಗಲಿದೆ.
ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾವಿರ ಕೋಟಿ ನೀಡಿದ್ದು, ಕಾರ್ಮಿಕರ ಜನಸಂಖ್ಯೆ ಆಧಾರದಡಿ ಅನುದಾನ ನೀಡಿದೆ. ಮಹಾರಾಷ್ಟ್ರ 181 ಕೋಟಿ, ಉತ್ತರ ಪ್ರದೇಶ 103 ಕೋಟಿ, ತಮಿಳುನಾಡು 83 ಕೋಟಿ, ಗುಜರಾತ್ 66 ಕೋಟಿ, ದೆಹಲಿ 55 ಕೋಟಿ, ಪಶ್ಚಿಮ ಬಂಗಾಳ 53 ಕೋಟಿ, ಬಿಹಾರ 51 ಕೋಟಿ, ಮಧ್ಯಪ್ರದೇಶ 50 ಕೋಟಿ, ರಾಜಸ್ಥಾನ 50 ಕೋಟಿ ಮತ್ತು ಕರ್ನಾಟಕ 34 ಕೋಟಿ ನೀಡಲಾಗಿದೆ.
ಈ ಹಿಂದೆ ಮೊದಲ ಹಂತದಲ್ಲಿ 3,100 ಕೋಟಿ ಹಣವನ್ನು ಪಿಎಂ ಕೇರ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲೂ ವೆಂಟಿಲೇಟರ್ ಖರೀದಿಗೆ ಎರಡು ಸಾವಿರ, ವಲಸೆ ಕಾರ್ಮಿರಿಗೆ ಸಾವಿರ ಹಾಗೂ ಲಸಿಕೆ ಅಭಿವೃದ್ಧಿ ನೂರು ಕೋಟಿ ಬಿಡುಗಡೆ ಮಾಡಲಾಗಿತ್ತು.
ಪಿಎಂ ಕೇರ್ಸ್ ಗೆ ಕೋಟ್ಯಾಂತರ ರೂ. ದಾನ ಬಂದಿದ್ದು ಕೇಂದ್ರ ಸರ್ಕಾರ ಇದರ ಲೆಕ್ಕ ನೀಡುತ್ತಿಲ್ಲ ಮತ್ತು ಅದರ ಬಳಕೆ ಮಾಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾಹಿತಿ ನೀಡಲು ಸೂಚಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಮದ್ರಾಸ್ ಸೇರಿಸಂತೆ ಹಲವು ಹೈಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಅನುದಾನ ಬಿಡುಗಡೆ ಮಾಡಿದೆ.