ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

Public TV
1 Min Read
ckm datth

– ನಿಮ್ಮೊಳಗಿರೋ ಶಿಕ್ಷಕ ಸದಾ ಹಸಿರಾಗಿರಲಿ ಮೇಷ್ಟ್ರೇ

ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ 8.30ರವರೆಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡುತ್ತಿದ್ದಾರೆ. ಒಂದು ವಾರ ಭೌತಶಾಸ್ತ್ರ ಹಾಗೂ ಮತ್ತೊಂದು ವಾರ ಗಣಿತ ಪಾಠ ಮಾಡುತ್ತಿದ್ದಾರೆ. ಕೊರೊನಾ ಭಯದಿಂದ ಮುಂದಕ್ಕೆ ಹೋಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತ ಮೆಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪುನರ್ ಮನನ ಮಾಡುವ ಉದ್ದೇಶದಿಂದ ಫೇಸ್‍ಬುಕ್ ಲೈವ್‍ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

dd195b40 4240 47cf 8d35 e93493b8a9dc

ಫೇಸ್‍ಬುಕ್‍ನಲ್ಲಿ ದತ್ತ ಮೇಷ್ಟ್ರ ಪಾಠ ನೋಡಿದ ಎಲ್ಲರೂ ನಾನು ನಿಮ್ಮ ಸ್ಟೂಡೆಂಟ್ ಆಗಬೇಕಿತ್ತು ಸರ್ ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತಾಗೆ ಶಿಕ್ಷಕ ವೃತ್ತಿ ಹೊಸತೇನಲ್ಲ. ಅವರು ಮೂಲತಃ ಶಿಕ್ಷಕರು. ಶಾಸಕರಾಗುವ ಮುನ್ನ ಬೆಂಗಳೂರಿನಲ್ಲಿ ಟ್ಯೂಷನ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಅವರು ಟ್ಯೂಷನ್ ದತ್ತಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದಾರೆ. ಅವರಿಂದ ಕಲಿತವರು ಬೆಂಗಳೂರಿನ ದಶದಿಕ್ಕುಗಳಲ್ಲೂ ಇದ್ದಾರೆ.

aa8197b3 81ec 4bf1 8725 db43059aeab8 1

ಈಗ ಕೊರೊನಾನ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಮತ್ತೊಮ್ಮೆ ಫೇಸ್‍ಬುಕ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ರಾಜಕೀಯ ಮರೆತು ದತ್ತ ಮೇಷ್ಟ್ರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕಾಗ ಇಬ್ಬರು ಮಾತನಾಡಿದ ಕುಶಲೋಪರಿಯನ್ನ ಪತ್ರದ ಮೂಲಕ ಮತ್ತೊಮ್ಮೆ ನೆನೆದಿದ್ದಾರೆ. ಪತ್ರದ ತುಂಬಾ ದತ್ತರವರನ್ನ ಹಾಡಿ ಹೊಗಳಿರೋ ಸುರೇಶ್ ಕುಮಾರ್ ನಿಮ್ಮೊಳಗಿರುವ ನೈಜ ಶಿಕ್ಷಕ ಸದಾ ಹಸಿರಾಗಿರಲಿ, ನಿಮ್ಮ ನಿಸ್ವಾರ್ಥ ಸೇವೆಗೆ, ಟ್ಯೂಷನ್ ಮೇಷ್ಟ್ರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *