ಸದ್ಯದ ಪರಿಸ್ಥಿತಿ ಡೇಂಜರಸ್ ವಿಕೆಟ್‍ನಲ್ಲಿ ಟೆಸ್ಟ್ ಆಡಿದಂತಿದೆ- ಕೊರೊನಾ ಬಗ್ಗೆ ದಾದ ಮಾತು

Public TV
2 Min Read
sourav ganguly

– ಲಾಕ್‍ಡೌನ್ ಕುಟುಂಬದವ್ರ ಜೊತೆ ಕಾಲಕಳೆಯಲು ಅವಕಾಶ ನೀಡ್ತು

ನವದೆಹಲಿ: ಸದ್ಯದ ಪರಿಸ್ಥಿತಿ ಡೇಂಜರಸ್ ವಿಕೆಟ್‍ನಲ್ಲಿ ಟೆಸ್ಟ್ ಆಡಿದಂತಿದೆ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಆಟಗಾರ ಸೌರವ್ ಗಂಗೂಲಿಯವರು ಕೊರೊನಾ ಸೋಂಕನ್ನು ಟೆಸ್ಟ್ ಕ್ರಿಕೆಟ್‍ಗೆ ಹೋಲಿಕೆ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಇಂದು ಇಡೀ ದೇಶಕ್ಕೆ ಮಹಾಕಂಟಕವಾಗಿ ಪರಿಣಮಿಸಿದೆ. ಇಡೀ ವಿಶ್ವದಲ್ಲೇ 35 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದರೆ, ಸುಮಾರು 2.40 ಲಕ್ಷ ಜನ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಈಗ ಸೌರವ್ ಗಂಗೂಲಿಯವರು ಮಾತನಾಡಿದ್ದಾರೆ.

CORONA 11

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಗೂಲಿ, ಸದ್ಯದ ಪರಿಸ್ಥಿತಿ ಡೇಂಜರಸ್ ವಿಕೆಟ್‍ನಲ್ಲಿ ಟೆಸ್ಟ್ ಆಡಿದಂತಿದೆ. ಈಗ ಚೆಂಡು ಚೆನ್ನಾಗಿ ಸ್ಪಿನ್ ಮತ್ತು ಸ್ವಿಂಗ್ ಆಗುತ್ತಿದೆ. ಈ ನಡುವೆ ಬ್ಯಾಟ್ಸ್ ಮನ್ ಔಟ್ ಆಗದೆ ಜೋಪಾನವಾಗಿ ಆಡಿ ವಿಕೆಟ್ ಉಳಿಸಿಕೊಂಡು ರನ್ ಹೊಡೆಯಬೇಕು ಎಂದು ಹೇಳಿ ತನ್ನದೇ ಶೈಲಿಯಲ್ಲಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದಾರೆ.

Sourav Ganguly 0

ಸದ್ಯದ ಪರಿಸ್ಥಿತಿಯನ್ನು ಕ್ರಿಕೆಟ್ ಆಟಕ್ಕೆ ಹೋಲಿಕೆ ಮಾಡಿ ಹೇಳಿರುವ ಗಂಗೂಲಿ, ಸದ್ಯದ ಪರಿಸ್ಥಿತಿ ಬ್ಯಾಟ್ಸ್ ಮನ್ ಗಳಿಗೆ ಕಷ್ಟವಾಗಿದೆ. ಬೌಲರ್ ತುಂಬ ಬಲಶಾಲಿಯಾಗಿದ್ದಾನೆ. ಹಾಗಾಗಿ ನಾವು ನಿಧಾನವಾಗಿ ಆಡಬೇಕು. ಜೊತೆಯಲ್ಲೇ ನಿಧಾನವಾಗಿ ರನ್ ಕದಿಯುವ ಮೂಲಕ ಈ ಟೆಸ್ಟ್ ಮ್ಯಾಚ್ ಅನ್ನು ಗೆಲ್ಲಬೇಕು. ನಾವೆಲ್ಲ ಸೇರಿ ಚೆನ್ನಾಗಿ ಬ್ಯಾಟಿಂಗ್ ಮಾಡಿ ಈ ಪಂದ್ಯವನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ದಾದ ಹೇಳಿದ್ದಾರೆ. ಇಲ್ಲಿ ಕೊರೊನಾವನ್ನು ಬೌಲರ್ ಗೆ ಹೋಲಿಸಿರುವ ದಾದ, ಜನರನ್ನು ಬ್ಯಾಟ್ಸ್ ಮ್ಯಾನ್, ಸದ್ಯದ ಪರಿಸ್ಥಿತಿಯನ್ನು ಟೆಸ್ಟ್ ಮ್ಯಾಚ್ ಎಂದು ಹೇಳಿದ್ದಾರೆ.

sourav ganguly

ಈ ವೇಳೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಬಗ್ಗೆ ಮಾತನಾಡಿರುವ ಸೌರವ್, ಈ ಸೋಂಕಿನಿಂದ ಬಹಳ ಜನರು ಸಾಯುತ್ತಿರುವುದನ್ನು ಕಂಡರೆ ನನಗೆ ಬೇಜಾರಾಗುತ್ತದೆ. ಜೊತೆಗೆ ಭಯವೂ ಆಗುತ್ತದೆ. ದಿನಸಿ, ಆಹಾರ ವಸ್ತುಗಳನ್ನು ಯಾರದರೂ ತಂದು ಕೊಟ್ಟರು ಕೂಡ ನನಗೆ ಭಯವಾಗುತ್ತದೆ. ಆದರೆ ಇದೆಲ್ಲ ಬೇಗ ಮುಗಿಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

delhi lockdown

ಇದೇ ವೇಳೆ ಲಾಕ್‍ಡೌನ್ ಬಗ್ಗೆ ಮಾತನಾಡಿರುವ ಗಂಗೂಲಿ, ಈ ಲಾಕ್‍ಡೌನ್‍ನಿಂದ ನನ್ನ ಕುಟುಂಬದ ಜೊತೆ ಕಾಲಕಳೆಯಲು ಬಹಳ ಸಮಯ ಸಿಕ್ಕಿದೆ. ನನ್ನ ಜೀವನದಲ್ಲಿ ನಾನು ಯಾವತ್ತೂ ಒಂದು ತಿಂಗಳುಗಳ ಕಾಲ ಮನೆಯಲ್ಲಿ ಇರಲಿಲ್ಲ. ನಾನು ಕೆಲಸ ಕೆಲಸ ಎಂದು ಯಾವಾಗಲೂ ಮನೆಯಿಂದ ಹೊರಗೆ ಇರುತ್ತಿದ್ದೆ. ಈಗ ನನ್ನ ಪತ್ನಿ, ಮಗಳು ತಾಯಿ ಸಹೋದರನ ಜೊತೆ ಕಾಲಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *