ಅನಾನಸ್ ಬೆಳೆ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್

Public TV
2 Min Read
Shivamogga DC

– ರೈತರ ಹಿತಕ್ಕಾಗಿ ಜಿಲ್ಲಾಧಿಕಾರಿಗಳ ಸಂವಾದ
– ಅನಾನಸ್ ಸಂಸ್ಕರಣೆ ಹೇಗೆ ಮಾಡೋದು?

ಶಿವಮೊಗ್ಗ: ಲಾಕ್‍ಡೌನ್‍ನಿಂದಾಗಿ ಸಮಸ್ಯೆಗೆ ಸಿಲುಕಿರುವ ಜಿಲ್ಲೆಯ ಅನಾನಸ್ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಇಂದು ಮೈಸೂರಿನ ಸಿಎಫ್‍ಟಿಆರ್‍ಐ (ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್ಸ್ಟಿಟ್ಯೂಟ್) ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

Shivamogga DC 2

ಜಿಲ್ಲೆಯಲ್ಲಿ ಅಂದಾಜು 65 ಸಾವಿರ ಟನ್ ಅನಾನಸು ಬೆಳೆದಿದ್ದು, ಕಳೆದ 20 ದಿನಗಳಲ್ಲಿ ವಿವಿಧ ಮೂಲಗಳನ್ನು ಬಳಸಿಕೊಂಡು ಅನಾನಸು ಮಾರುಕಟ್ಟೆಗೆ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ರಾಜಾ ತಳಿಯ ಅನಾನಸಿಗೆ ದೆಹಲಿಯ ಜ್ಯೂಸ್ ಕಂಪನಿಗಳು ಪ್ರಮುಖ ಮಾರುಕಟ್ಟೆಯಾಗಿದ್ದು, ಲಾಕ್‍ಡೌನ್‍ನಿಂದ ಸಾಗಾಟ ತೊಂದರೆಯಾಗಿದೆ. ಪ್ರಸ್ತುತ ದಿನನಿತ್ಯ 125 ರಿಂದ 150 ಟನ್ ಮಾತ್ರ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಪ್ರತಿನಿತ್ಯ 250 ರಿಂದ 300 ಟನ್ ಇಳುವರಿ ಬರುತ್ತಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಮಾರುಕಟ್ಟೆ ಕಲ್ಪಿಸಲು, ವಿವಿಧ ಆಹಾರ ಸಂಸ್ಕರಣಾ ತಂತ್ರಗಳನ್ನು ಬಳಸಿಕೊಂಡು ಅನಾನಸು ಉತ್ಪನ್ನಗಳನ್ನು ದಾಸ್ತಾನು ಇರಿಸುವುದು ಸೇರಿದಂತೆ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಅವಕಾಶಗಳ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರಿಂದ ಮಾರ್ಗದರ್ಶನ ಬಯಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Shivamogga DC 3

ಕೋಲ್ಡ್ ಸ್ಟೋರೇಜ್ ಬಳಸಿಕೊಂಡು ಅನಾನಸು ಗರಿಷ್ಠ ಒಂದು ವಾರಗಳ ಕಾಲ ಮಾತ್ರ ದಾಸ್ತಾನು ಇರಿಸಲು ಸಾಧ್ಯವಿದೆ. ಅದನ್ನು ಪಲ್ಪ್ ಆಗಿ ಪರಿವರ್ತಿಸಿದರೆ ಗರಿಷ್ಟ ಎರಡು ವರ್ಷಗಳ ಕಾಲ ಕಾಪಿಡಬಹುದಾಗಿದೆ. ಹುಬ್ಬಳ್ಳಿ ಮತ್ತು ಚಿತ್ತೂರುಗಳಲ್ಲಿ ಅಂತಹ ಸಂಸ್ಕರಣಾ ಉದ್ಯಮಗಳಿದ್ದು, ಅನಾನಸನ್ನು ಪಲ್ಪ್ ಆಗಿ ಪರಿವರ್ತಿಸಿದ ಬಳಿಕ ಹಾಪ್‍ಕಾಮ್ಸ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಿಎಫ್‍ಟಿಆರ್‍ಐ ಅಧಿಕಾರಿಗಳು ಸಲಹೆ ನೀಡಿದರು.

Shivamogga DC 1

ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಅನಾನಸು ಸಂಸ್ಕರಣೆಯನ್ನು ಸ್ಥಳೀಯವಾಗಿ ಮಾಡಲು ಸಾಧ್ಯವಿದೆ. ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಅಂತಹ ಚಟುವಟಿಕೆ ನಡೆಸಲು, ರೈತರಿಗೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸೂಕ್ತ ತರಬೇತಿಯನ್ನು ನೀಡಲು ಸಂಸ್ಥೆ ಸಿದ್ಧವಿದೆ. ಲಾಕ್‍ಡೌನ್ ಮುಗಿದ ಬಳಿಕ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಿಎಫ್‍ಟಿಆರ್‍ಐ ಎಲ್ಲಾ ತಾಂತ್ರಿಕ ನೆರವು ನೀಡಲು ಸಿದ್ಧವಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರಾಘವರಾವ್ ಹೇಳಿದರು.

ಈ ವೇಳೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *