ಬಡವರ ಆತ್ಮಗೌರವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ: ಪಿ.ಚಿದಂಬರಂ

Public TV
1 Min Read
Chidambaram

ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು, ಹಸಿವಿನಿಂದ ಬಳಲುತ್ತಿರುವ ಬಡವರ ಆತ್ಮಗೌರವವನ್ನು ಕಾಪಾಡುವಲ್ಲಿ ಸರ್ಕಾರ ಎಡವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ, ತುಂಬಾ ಜನರ ಬಳಿ ಹಣವೇ ಇಲ್ಲದಂತಾಗಿದ್ದು, ಬಹುತೇಕರು ಉಚಿತವಾಗಿ ಹಂಚುತ್ತಿರುವ ಊಟಕ್ಕಾಗಿ ಸಾಲು ನಿಲ್ಲುತ್ತಿದ್ದಾರೆ. ಇಂತಹವರಿಗೆ ಸರ್ಕಾರ ಹಣ ನೀಡಬೇಕು ಹಾಗೂ ಉಚಿತ ಆಹಾರ ಪದಾರ್ಥಗಳನ್ನು ನೀಡಬೇಕು. ಕೇವಲ ಹೃದಯವಿಲ್ಲದ ಸರ್ಕಾರ ಮಾತ್ರ ಏನೂ ಮಾಡದಿರಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ ಹಣ ನೀಡುವ ಮೂಲಕ ಜನರನ್ನು ಹಸಿವಿನಿಂದ ಯಾಕೆ ಕಾಪಾಡುತ್ತಿಲ್ಲ ಹಾಗೂ ಅವರ ಗೌರವವನ್ನೇಕೆ ಉಳಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 77 ಮಿಲಿಯನ್ ಟನ್ ಧಾನ್ಯಗಳಿದ್ದು, ಅದರಲ್ಲಿ ಸಣ್ಣ ಪ್ರಮಾಣವನ್ನು ಸರ್ಕಾರ ಬಡವರಿಗೇಕೆ ಹಂಚುತ್ತಿಲ್ಲ ಎಂದು ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎರಡು ಟ್ವೀಟ್‍ಗೆ ಪ್ರತಿಯಾಗಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಈ ಎರಡು ಆರ್ಥಿಕತೆ ಹಾಗೂ ನೈತಿಕತೆಯ ಪ್ರಶ್ನೆಗಳಾಗಿದ್ದು, ಇವೆರಡಕ್ಕೂ ಉತ್ತರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಫಲರಾಗಿದ್ದಾರೆ ಎಂದು ಅವರನ್ನು ಟ್ಯಾಗ್ ಮಾಡಿದ್ದಾರೆ. ಇಡೀ ದೇಶ ಇದನ್ನು ಅಸಹಾಯಕತೆಯಿಂದ ವಿಕ್ಷೀಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

coronavirus

ದೇಶಾದ್ಯಂತ 15 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದರ ಕುರಿತು ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *