ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಿದ್ದಾರೆ. ಆದರೆ ಇದಕ್ಕೆ ಹಾವೇರಿಯ ಕೆಲವು ಜನ ಡೋಂಟ್ ಕೇರ್ ಅಂದಿದ್ದಾರೆ.
ಹೌದು. ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಹಣ ಪಡೆಯಲು ಮುಗಿಬಿದ್ದಿದ್ದಾರೆ. ಜನಧನ ಖಾತೆಗೆ ಸರ್ಕಾರ 500 ರೂ. ಜಮಾ ಮಾಡಿದೆ. ಈ ಹಣವನ್ನ ಪಡೆದುಕೊಳ್ಳಲು ಜನರು ಲಾಕ್ ಡೌನ್ ನಿಯಮವನ್ನ ಉಲ್ಲಂಘಿಸಿ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಜಾತ್ರೆಗೆ ಸೇರಿದಂತೆ ಜನ ನೆರೆದಿದ್ದಾರೆ.
ಹೊಸರಿತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಬ್ಯಾಂಕ್ ಮುಂದೆ ಜಮಾಯಿಸಿದ್ದು, ಬ್ಯಾಂಕ್ ಬಾಗಿಲು ತೆರೆಯುವ ಮುನ್ನವೇ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ. ಏಕಾಏಕಿ ಸಾಕಷ್ಟು ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ.