ಧಾರವಾಡ: ಭಾರತ ಲಾಕ್ ಡೌನ್ ಆಗಿ ಅದೆಷ್ಟೋ ಜನ ಊಟಕ್ಕೂ ಪರದಾಡುವಂಥಹ ಸ್ಥಿತಿ ಬಂದೊದಗಿದೆ. ಇನ್ನೊಂದು ಕಡೆ ಪೊಲೀಸರು ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಪೌರ ಕಾರ್ಮಿಕರು ಅವಿರತವಾಗಿ ದುಡಿಯುತ್ತಿದ್ದಾರೆ. ಇವರಲ್ಲಿ ಅದೆಷ್ಟೋ ಜನರಿಗೆ ಮಧ್ಯಾಹ್ನದ ಊಟವೂ ಸಿಗ್ತಿಲ್ಲ. ಅಂತವರಿಗಾಗಿಯೇ ಧಾರವಾಡದ ಶಿರಡಿ ಸಾಯಿ ಬಾಬಾ ಸನ್ನಿಧಿಯಲ್ಲಿ ಅನ್ನ ಛತ್ರವೊಂದು ನಡೆಯುತ್ತಿದ್ದು, ಕೊರೊನಾಗಾಗಿ ದುಡಿಯುವವರ ಪಾಲಿಗೆ ಸಾಯಿಬಾಬಾ ಸನ್ನಿಧಿಯಲ್ಲಿ ಅಕ್ಷಯ ಪಾತ್ರೆ ಒಲಿದಿದೆ.
ಭಾರತ ಲಾಕ್ ಡೌನ್ ಆಗುವ ಮುಂಚೆಯೇ ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣವೊಂದು ದಾಖಲಾಗಿತ್ತು. ಹೀಗಾಗಿ ಮುಂಚಿತವಾಗಿಯೇ ಅದೆಷ್ಟೋ ಕಟ್ಟುನಿಟ್ಟುಗಳನ್ನು ಹಾಕಲಾಗಿತ್ತು. ಹೀಗಾಗಿ ಪೊಲೀಸರು, ಪೌರ ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಜನರಿಗೆ ಪಡಿತರ ಪೂರೈಸುವ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಅಧಿಕಾರಿಗಳು, ಸಾಗಾಣಿಕೆದಾರರು, ಹಮಾಲಿಗಳು ದುಡಿಯುತ್ತಿದ್ದು, ಅವರೆಲ್ಲರೂ ಮಧ್ಯಾಹ್ನದ ಊಟಕ್ಕೆ ಪರದಾಡ್ತಾ ಇದ್ದರು.
ಇದನ್ನು ನೋಡಿದ ಧಾರವಾಡದ ಕೆಲಗೇರೆಯ ಶಿರಡಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಹಾಗೂ ಧಾರವಾಡ ಗೆಳೆಯರ ಬಳಗದವರೆಲ್ಲ ಊಟ ನೀಡುತ್ತಿದ್ದಾರೆ. ಅದರಲ್ಲಿಯೂ ಒಂದೇ ರೀತಿಯ ಊಟ ನೀಡದೇ ಚಪಾತಿ ಪಲ್ಯ, ಫಲಾವ್, ಪುಳಿಯೋಗರೆ, ಬಿಸಿ ಬೇಳೆಬಾತ್ ಹೀಗೆ ಒಂದೊಂದು ವಿಶೇಷ ಮಾಡಿಕೊಡುತ್ತಿದ್ದು, ವಿಶೇಷ ದಿನಗಳಂದು ಸಿಹಿಯನ್ನು ಸಹ ಮಾಡಿಕೊಡುತ್ತಿದ್ದಾರೆ.
ಹೈಜೆನಿಕ್ ಆಗಿ ಅಡುಗೆ ಮಾಡಿ ನೀಡುವುದರ ಜೊತೆಗೆ ನೀರಿನ ಬಾಟಲಿಗಳನ್ನು ಸಹ ಅವರವರು ಇರುವಲ್ಲಿಗೆಯೇ ತಲುಪಿಸುತ್ತಿದ್ದಾರೆ. ಇದಕ್ಕೆಲ್ಲ ಶಿರಡಿ ದೇವಸ್ಥಾನ ಮಂಡಳಿಯವರು ಹಾಗೂ ಧಾರವಾಡ ಗೆಳೆಯರೇ ಹಣ ಖರ್ಚು ಮಾಡುತ್ತಿದ್ದಾರೆ.