ಶಿವಮೊಗ್ಗ: ಪ್ರೇರಣಾ ಸಂಸ್ಥೆಯು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ, ಫೆಬ್ರವರಿ 27ರಿಂದ 29ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ 83,273 ಕಾರ್ಡ್ ವಿತರಿಸಲಾಗಿದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಫೆಬ್ರವರಿ ಮಾಹೆಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನ 42 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 14,190, ಭದ್ರಾವತಿ ತಾಲೂಕಿನ 41 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 11,678, ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 8,781, ಸಾಗರ ತಾಲೂಕಿನ 34 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 8,079, ಸೊರಬ ತಾಲೂಕಿನ 41 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 11,139, ಶಿಕಾರಿಪುರ ತಾಲೂಕಿನ 44 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 13,978, ಹೊಸನಗರ ತಾಲೂಕಿನ 30 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 7,867 ಹಾಗೂ ಬೈಂದೂರು ಪ್ರದೇಶದ ವ್ಯಾಪ್ತಿಯಲ್ಲಿ 1,867 ಮತ್ತು ನಗರ ಮತ್ತು ಪಟ್ಟಣ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿ.ಹೆಚ್.ಸಿ ಮೂಲಕ 6,048 ಜನರಿಗೆ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿಎಸ್‍ವೈ ಅವರ ಆಶಯದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯನ್ನು ಜನಸಾಮಾನ್ಯರ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರೇರಣಾ ಟ್ರಸ್ಟ್ ಶ್ರಮಿಸಿತ್ತು. ಬೈಂದೂರು ಮತಕ್ಷೇತ್ರ ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಡ್‍ಗಳ ವಿತರಣೆಗಾಗಿ ವಿಶೇಷ ಆಂದೋಲನವನ್ನು ಆಯೋಜಿಸಿತ್ತು. ಇದರಿಂದಾಗಿ 75 ಸಾವಿರಕ್ಕೂ ಅಧಿಕ ಮಂದಿ ಆರೋಗ್ಯ ಕಾರ್ಡ್‍ನ್ನು ಪಡೆದುಕೊಂಡಿದ್ದರು. ಈ ಮೂಲಕ ಈವರೆಗೆ ಒಟ್ಟು 1,58,273 ಮಂದಿ ಕಾರ್ಡುಗಳನ್ನು ಪಡೆದುಕೊಂಡಂತಾಗಿದೆ ಎಂದಿದ್ದಾರೆ.
ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 313 ಬಾಪೂಜಿ ಸೇವಾ ಕೇಂದ್ರಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿನ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರ ಪ್ರಮುಖವಾಗಿದೆ. ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಸಹಕರಿಸಿದ ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂಧಿ ವರ್ಗದವರು, ಜಿಲ್ಲಾ ಪಂಚಾಯ್ತಿ ಅಧೀನಕ್ಕೊಳಪಟ್ಟ ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿ ವರ್ಗ, ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಭಿನಂದನಾರ್ಹರು ಎಂದು ರಾಘವೇಂದ್ರ ಅವರು ತಿಳಿಸಿದ್ದಾರೆ.