ಸೂರಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ದುನಿಯಾ ಮೂಲಕ ಚಿರಪರಿಚಿತವಾದ ಟ್ಯಾಲೆಂಟೆಡ್ ನಟಿ ರಶ್ಮಿ. ಚಿತ್ರದ ಯಶಸ್ಸಿನ ನಂತರ ದುನಿಯಾ ರಶ್ಮಿ ಎಂದೇ ಖ್ಯಾತಿಯಾಗಿರೋ ಈಕೆ ದುನಿಯಾ ನಂತರ ಮುರಾರಿ, ಮಂದಾಕಿನಿ, ಅಕ್ಕ-ತಂಗಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ, ಹೆಸರೂ ತಂದು ಕೊಡಲಿಲ್ಲ. ಒಂದಷ್ಟು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ದುನಿಯಾ ರಶ್ಮಿ ನಂತರ ಪ್ರತ್ಯಕ್ಷವಾಗಿದ್ದು ಬಿಗ್ ಬಾಸ್ ಸೀಸನ್-7ರ ವೇದಿಕೆಯಲ್ಲಿ. ಗೆದ್ದು ಸೋತು ಮತ್ತೆ ಗೆಲುವಿಗಾಗಿ ಹಂಬಲಿಸುತ್ತಿರುವ ಈ ಮುದ್ದು ಮುಖದ ಚೆಲುವೆ ಈಗ ಜಗ್ಗಿ ಜಗನ್ನಾಥ್ ಚಿತ್ರದ ಮೂಲಕ ಆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಹೌದು, ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಓರಿಯೆಂಟೆಡ್ ಜಗ್ಗಿ ಜಗನ್ನಾಥ ಸಿನಿಮಾದಲ್ಲಿ ದುನಿಯಾ ರಶ್ಮಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಾಮಿಸಿಂಗ್ ಟ್ರೈಲರ್ ಸದ್ದು ಮಾಡ್ತಿದೆ. ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ದುನಿಯಾ ರಶ್ಮಿ ಚಿತ್ರದಲ್ಲಿ ನಟಿಸಿದ್ದು, ಈ ಪಾತ್ರವನ್ನು ಹಾಗೂ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ ದುನಿಯಾ ರಶ್ಮಿ.
ನವ ನಟ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಆ್ಯಕ್ಷನ್ ಜೊತೆಗೆ ಮಾಫಿಯ ಕಥೆಯೂ ಚಿತ್ರದಲ್ಲಿದೆ. ಮೊಟ್ಟ ಮೊದಲ ಬಾರಿ ಆ್ಯಕ್ಷನ್ ಸಿನಿಮಾಗೆ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ಕೂಡ ಈ ಚಿತ್ರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಾಯಿ ಕುಮಾರ್ ಪೊಲೀಸ್ ಸೂಪರ್ ಕಾಪ್ ಆಗಿ ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಪದ್ಮಜಾ ರಾವ್, ತಬಲ ನಾಣಿ, ಪವನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ದುನಿಯಾ ರಶ್ಮಿ ಕರಿಯರ್ ಗೆ ಜಗ್ಗಿ ಜಗನ್ನಾಥ ಬ್ರೈಟ್ ಫ್ಯೂಚರ್ ನೀಡುತ್ತಾನಾ ಅನ್ನೋದನ್ನ ಕಾದು ನೋಡಬೇಕು.