ಚಿಕ್ಕೋಡಿ: ಅಡುಗೆ ಎಣ್ಣೆ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಕಲಬೆರಕೆ ಹಾಲು ತಯಾರಿಸುತ್ತಿದ್ದ ಹಾಲು ಉತ್ಪಾದಕ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೋರವಲದಲ್ಲಿ ಘಟನೆ ನಡೆದಿದ್ದು, ಝುಂಜರವಾಡ ಗ್ರಾಮದ ಉಮರಾಲಿ ಅನಸಾರಿ(23)ಯನ್ನು ಬಂಧಿಸಲಾಗಿದೆ. ಅಪಾರ ಪ್ರಮಾಣದ ಕಲಬೆರಕೆ ಹಾಲು ತಯಾರಿಸುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕಲಬೆರಕೆಯ 665 ಲೀಟರ್ ಹಾಲು ಜಪ್ತಿ ಮಾಡಿಕೊಂಡಿದ್ದಾರೆ. ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಎಣ್ಣೆ, ಒಂದು ಮಿಕ್ಸಿ ಸೇರಿ ಒಟ್ಟು 49,270 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.
ಬೆಳಗಾವಿ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.