ಹಾಸನ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ಖತರ್ನಾಕ್ ಉಪಾಯ ಮಾಡಿ ಪತಿ ಜೀವ ತೆಗೆಯಲು ಹೋದವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದ ಆನಂದ್‍ನನ್ನು ಆತನ ಪತ್ನಿ ರಮ್ಯಾ ಕೊಲೆ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾಳೆ. 6 ವರ್ಷಗಳ ಹಿಂದೆ ಆನಂದ್ ರಮ್ಯಾನನ್ನು ಮದುವೆಯಾಗಿದ್ದು, ಇವರಿಗೆ 4 ವರ್ಷದ ಮಗಳು ಇದ್ದಾಳೆ. ಫೆಬ್ರವರಿ 11ರ ರಾತ್ರಿ 10 ಗಂಟೆಗೆ ರಮ್ಯಾ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತಿಗೆ ಕೊಟ್ಟಿದ್ದಳು. ಊಟ ಮಾಡಿ ಪತಿ ಮಲಗಿದ ಬಳಿಕ ರಮ್ಯಾ ಪ್ರಿಯಕರನೊಂದಿಗೆ ಸೇರಿ, ಪತಿಯ ಕೈ ಕಾಲುಗಳನ್ನು ಮಂಚಕ್ಕೆ ಕಟ್ಟಿ ಕೊಲೆಗೆ ಯತ್ನಿಸಿದ್ದಳು ಎಂದು ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಕೈ-ಕಾಲುಗಳನ್ನು ಮಂಚಕ್ಕೆ ಕಟ್ಟಿ ಪತಿಯ ಕೊಲೆಗೆ ಪತ್ನಿ ಯತ್ನ
ಈ ವೇಳೆ ಪತಿಗೆ ಎಚ್ಚರವಾಗಿ ಕಿರುಚಾಡಿದಾಗ ಆತನನ್ನು ಬಿಟ್ಟು ಪ್ರಿಯಕರನೊಂದಿಗೆ ಪತ್ನಿ ಪರಾರಿಯಾಗಿದ್ದಳು. ಈ ಬಗ್ಗೆ ಆನಂದ್ ಆರೋಪಿಸಿ ಪೊಲೀಸರಿಗೆ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದನು. ಇದೀಗ ರಮ್ಯಾಳನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಳಿದ ಆರೋಪಿಗಳಿಗೆ ಬಲೆ ಬೀಸಿರುವ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.