– ಪಾಲಿಕೆ ಚುನಾವಣೆಯಾದ 3 ತಿಂಗಳ ಬಳಿಕ ಮೇಯರ್ ಚುನಾವಣೆ
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬರೋಬ್ಬರಿ 3 ತಿಂಗಳು ಬೇಕಾಗಿದ್ದು, ಕೊನೆಗೂ ಮೇಯರ್ ಚುನಾವಣೆಗೆ ಸರ್ಕಾರ ದಿನ ನಿಗದಿ ಮಾಡಿದೆ.
ಕಳೆದ ಮೂರು ತಿಂಗಳ ಹಿಂದೆ ಚುನಾವಣೆ ನಡೆದಿದ್ದ ಮಂಗಳೂರು ಮಹಾ ನಗರ ಪಾಲಿಕೆಯ ಒಟ್ಟು 60 ಸದಸ್ಯ ಬಲದಲ್ಲಿ ಬರೋಬ್ಬರಿ 44 ಸ್ಥಾನ ಪಡೆದ ಬಿಜೆಪಿ ಅಂದೇ ಪಾಲಿಕೆಯ ಗದ್ದುಗೆ ಹಿಡಿಯಬಹುದಿತ್ತು. ಆದರೆ ಮೀಸಲು ನಿಗದಿ ವಿಚಾರದಲ್ಲಿ ಬಿಜೆಪಿ ಒಳಗೆ ತಕರಾರು ಇದ್ದ ಹಿನ್ನೆಲೆಯಲ್ಲಿ ಮೀಸಲಾತಿ ಬದಲಾವಣೆಗೆ ಕೆಲವು ಸದಸ್ಯರು ಪ್ರಯತ್ನಿಸಿದ್ದರು. ಇದೀಗ ಈ ಹಿಂದೆ ನಿಗದಿಯಾದಂತೆ 21ನೇ ಅವಧಿಯ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ.
ಫೆಬ್ರವರಿ 28ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದರೂ ತಮ್ಮದೇ ಪಕ್ಷಕ್ಕೆ ಸಿಕ್ಕ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಮೂರು ತಿಂಗಳ ಕಾಲ ಕಳೆದುಕೊಂಡಿರುವುದು ಮಾತ್ರ ವಿಪರ್ಯಾಸ.