ರಾಯಚೂರು: ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಮಂದಿರದ ಸೆಕ್ಯೂರಿಟಿ ಗಾರ್ಡ್ ಸಿದ್ದಯ್ಯ ಬಂಧಿತ ಆರೋಪಿ. ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಹಿನ್ನೆಲೆ ಅಡುಗೆ ಸಹಾಯಕಿ ಕಮಲಮ್ಮ ಹಾಗೂ ಪ್ರಕರಣದ ಬಗ್ಗೆ ಮಾಹಿತಿ ತಿಳಿದಾಗಲೂ ಕ್ರಮಕ್ಕೆ ಮುಂದಾಗದ ಬಾಲಮಂದಿರದ ಅಧೀಕ್ಷಕ ಸೈಯದ್ ಪಾಷಾ ಅವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ಸಿದ್ದಯ್ಯ ನವಂಬರ್ 11ರಂದು ಬಾಲಮಂದಿರದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ತಿಳಿದ ವಿದ್ಯಾರ್ಥಿನಿಯ ಅಣ್ಣ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಜನವರಿ 30ರಂದು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಮಂದಿರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹಾಗೂ ಎಸ್‍ಪಿ ಡಾ. ಸಿ.ಬಿ.ವೇದಮೂರ್ತಿ ಪರಿಶೀಲನೆ ನಡೆಸಿದ್ದರು. ಬಾಲಮಂದಿರದ ಅಧೀಕ್ಷಕ ಸೈಯದ್ ಪಾಷಾನನ್ನ ಅಮಾನತುಗೊಳಿಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುಪ್ರಸಾದ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು.