ಉಡುಪಿ: ಶನಿ ಇಂದು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ಬಳಿಕ ಈ ವಿದ್ಯಮಾನ ನಡೆಯುತ್ತಿದೆ. ಶನಿ ತನ್ನ ಸ್ವಂತ ಮನೆ ಮಕರಕ್ಕೆ ಪ್ರವೇಶ ಮಾಡುತ್ತಿದ್ದು ಎಲ್ಲೆಡೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ.
ಉಡುಪಿ ಜಿಲ್ಲೆ ಬನ್ನಂಜೆಯ ಶನೀಶ್ವರ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಶನಿ ಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಬನ್ನಂಜೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. 23 ಅಡಿ ಎತ್ತರದ ಶನಿ ದೇವರ ವಿಗ್ರಹವನು ಬನ್ನಂಜೆಯಲ್ಲಿ ಸ್ಥಾಪಿಸಲಾಗಿದ್ದು, ವಿಶ್ವದ ಏಕೈಕ ಅತೀ ಎತ್ತರದ ವಿಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ.
ಭಕ್ತರು ಎಳ್ಳೆಣ್ಣೆ ಅಭಿಷೇಕ, ಎಳ್ಳು ಗಂಟು ಆರತಿ ಮತ್ತಿತರ ಸೇವೆಯನ್ನು ಭಕ್ತರೇ ದೇವರಿಗೆ ಅರ್ಪಿಸುವ ವಿಶೇಷ ಅವಕಾಶ ಬನ್ನಂಜೆ ಕ್ಷೇತ್ರದಲ್ಲಿದೆ. ಕ್ಷೇತ್ರದ ಪೂಜೆಯ ಅರ್ಚಕ ಸತ್ಯನಾರಾಯಣ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಭಕ್ತರಾಧಿಗಳಿಗಳ ಶನಿದೋಷ ಪರಿಹಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ ಎಂದರು.
ಎಳ್ಳೆಣ್ಣೆಯ ಅಭಿಷೇಕ ಅರ್ಚಕರಿಂದ ಆಗುವುದಿಲ್ಲ. ಬಂದ ಭಕ್ತರು ಎಣ್ಣೆ ಖರೀದಿ ಮಾಡಿ ಅಭಿಷೇಕ ಮಾಡುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು 10 ವರ್ಷದ ಹಿಂದೆ ವಾರಂಗಲ್ ನಿಂದ ಬೃಹತ್ ಕರಿಕಲ್ಲನ್ನು ಉಡುಪಿಗೆ ತಂದಿದ್ದರು. ಎರಡು ವರ್ಷಗಳ ಕಾಲ ಕಲ್ಲನ್ನು ಇಲ್ಲೇ ಕೆತ್ತನೆ ಮಾಡಲಾಯಿತು. ಇದೀಗ 10 ವರ್ಷಗಳ ಹಿಂದೆ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿ ಶನಿವಾರ ಸಾವಿರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಇಂದು ವಿಶೇಷ ದಿನವಾಗಿರುವುದರಿಂದ ಹೋಮ ಹವನಾದಿಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಉಡುಪಿ ನಗರದಿಂದ ಎರಡು ಕಿ.ಮೀ ದೂರವಿರುವ ಬನ್ನಂಜೆ ಶನೀಶ್ವರ ಕ್ಷೇತ್ರ ದೇಶದಲ್ಲೇ ವಿಶಿಷ್ಟವಾದ ದೇವಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.