ನವದೆಹಲಿ: 15 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್ ಇಂದು ದೆಹಲಿಯಲ್ಲಿ ನೆಲೆ ಕಳೆದುಕೊಂಡಿದೆ. ಈ ಬಾರಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯಲು ಕಷ್ಟಪಡುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ.
ದೆಹಲಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ಆರಂಭವಾಗಿದೆ. ಆಮ್ ಆದ್ಮಿ, ಕಾಂಗ್ರೆಸ್, ಬಿಜೆಪಿ ಈ ಬಾರಿ ದೆಹಲಿ ಗದ್ದುಗೆ ಏರಲು ಸಿದ್ಧತೆ ನಡೆಸಿಕೊಂಡಿದೆ. ಆಮ್ ಆದ್ಮಿ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣಿ ವಾತಾವರಣ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವ ಪರಿಸ್ಥಿತಿ ಬಂದಿದೆ.
ಮೂರು ಅವಧಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ದೆಹಲಿಯಲ್ಲಿ ಕಳೆದ ಬಾರಿ ಖಾತೆ ತೆರೆದಿಲ್ಲ ಹೀಗೆ ನೆಲೆ ಕಳೆದುಕೊಂಡಿದ್ದು ಯಾಕೆ ಎನ್ನುವ ಕಾರಣ ಹುಡುಕಿದರೆ ಅಲ್ಲಿ ಉತ್ತರ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸೃಷ್ಟಿಸಿದ್ದ ಸಂಚಲನ. 2013ಕ್ಕೆ ಚುನಾವಣಾ ಕಣಕ್ಕಿಳಿದ ಆಮ್ ಆದ್ಮಿ 2015ರ ಚುನಾವಣಾ ಬಳಿಕ ಇಡೀ ಕಾಂಗ್ರೆಸ್ ವೋಟ್ ಬ್ಯಾಂಕ್ ಅನ್ನು ಕಸಿದುಕೊಂಡಿದೆ. ಕಾಂಗ್ರೆಸ್ ಬಹುತೇಕ ವೋಟ್ ಬ್ಯಾಂಕ್ ಆಪ್‍ಗೆ ಶಿಫ್ಟ್ ಆಗಿದ್ದು, ಕಾಂಗ್ರೆಸ್ ಮತ್ತು ಆಪ್ ಒಂದೇ ಮತ ಬ್ಯಾಂಕಿಗೆ ಕೈ ಹಾಕಿದೆ.
2013ರ ಚುನಾವಣೆಯಲ್ಲಿ ಎಎಪಿ 70ರಲ್ಲಿ 28 ಸ್ಥಾನಗಳನ್ನು ಗೆದ್ದು ಶೇ. 29.49 ರಷ್ಟು, 2015ರಲ್ಲಿ 67 ಸ್ಥಾನಗಳನ್ನು ಗಳಿಸಿ ಶೇ. 54.3ರಷ್ಟು ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ 2013ರಲ್ಲಿ ಎಂಟು ಸ್ಥಾನಗಳನ್ನು ಗೆದ್ದು 24.55ರಷ್ಟು ಮತಗಳನ್ನು ಗಳಿಸಿತ್ತು. ಆದರೆ 2015ರಲ್ಲಿ ಶೇ 9.8ಕ್ಕೆ ಕುಸಿಯಿತು. 2013ರಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆದ್ದಿದ್ದು, ಶೇ. 33.07ರಷ್ಟು ಮತಗಳನ್ನು ಗಳಿಸಿದೆ. 2015ರಲ್ಲಿ ಕೇವಲ ಒಂದು ಶೇ. ಕಡಿಮೆಯಾಗಿದೆ ಮತ್ತು ಶೇಕಡಾ 32.1 ರಷ್ಟಿತ್ತು ಆದರೆ ಪಕ್ಷವು ಕೇವಲ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ದೆಹಲಿಯಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿ ಬಿಜೆಪಿ ಬದಲು ಆಡಳಿತರೂಢಿ ಆಮ್ ಆದ್ಮಿ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ ಆಪ್ ಜೊತೆಗೆ ಮೃದು ಧೋರಣೆ ಹೊಂದಿದ್ದು ಸರ್ಕಾರದ ವಿರುದ್ಧ ದೊಡ್ಡ ಹೋರಾಟಗಳೇನು ನಡೆಯುತ್ತಿಲ್ಲ. ಇವೆರಡು ಪಕ್ಷಗಳ ನಡುವೆ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೂ ಶೇಕಡವಾರು ಮತಗಳಿಕೆಯಲ್ಲಿ ಬಿಜೆಪಿ ಉತ್ತಮವಾಗಿದೆ.
ಈ ನಡುವೆ ಮತ್ತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಕ್ಯಾಂಪೇನ್ ಆರಂಭಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಆರ್ ಸಿ) ವಿರೋಧವನ್ನು ಬಳಸಿಕೊಂಡು ಕಳೆದುಕೊಂಡ ಮತಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ಅಲ್ಲದೇ ಬಿಹಾರಿ ಮತದಾರರನ್ನು ಸೆಳೆದುಕೊಳ್ಳಲು ಆರ್‍ಜೆಡಿ ಜೊತೆಗೂ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ಆಪ್ ಸಿಎಎ ಮತ್ತು ಎನ್‍ಆರ್‍ಸಿ ವಿಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ಚದುರಿ ಹೋಗಿದ್ದ ವೋಟ್ ಕಾಂಗ್ರೆಸ್‍ಗೆ ಮರಳುತ್ತಾ, ಈ ಬಾರಿ ಖಾತೆ ಓಪನ್ ಆಗುತ್ತಾ ಎನ್ನವುದು ಫೆಬ್ರವರಿ 11ಕ್ಕೆ ತಿಳಿಯಲಿದೆ.