ಧವನ್, ಕೊಹ್ಲಿ ಜತೆ ಕೊನೆಗೆ ರಾಹುಲ್ ಸ್ಫೋಟಕ ಬ್ಯಾಟಿಂಗ್- ಆಸೀಸ್‍ಗೆ 341 ರನ್ ಗುರಿ

Public TV
3 Min Read
Team India

– ಸಿಕ್ಕ ಅವಕಾಶ ಕೈಚೆಲ್ಲಿಕೊಂಡ ಅಯ್ಯರ್, ಪಾಂಡೆ
– 5ನೇ ಕ್ರಮಾಂಕದಲ್ಲಿ ಮೈದಾಕ್ಕಿಳಿದು ಘರ್ಜಿಸಿದ ರಾಹುಲ್

ರಾಜ್‍ಕೋಟ್: ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್‍ನಿಂದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ 341 ರನ್‍ಗಳ ಗುರಿಯನ್ನು ನೀಡಿದೆ.

ಗುಜರಾತ್‍ನ ರಾಜ್‍ಕೋಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ 42 ರನ್ (44 ಎಸೆತ, 6 ಬೌಂಡರಿ), ಶಿಖರ್ ಧವನ್ 96 ರನ್ (90 ಎಸೆತ, 13 ಬೌಂಡರಿ, ಸಿಕ್ಸ್), ವಿರಾಟ್ ಕೊಹ್ಲಿ 78 ರನ್ (76 ಎಸೆತ, 6 ಬೌಂಡರಿ) ಹಾಗೂ ಕೆ.ಎಲ್.ರಾಹುಲ್ 80 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್) ಸಹಾಯದಿಂದ 6 ವಿಕೆಟ್‍ಗಳ ನಷ್ಟದಿಂದ 340 ರನ್ ಪೇರಿಸಿದೆ. ಇದನ್ನೂ ಓದಿ: ಪಂಥ್ ಸ್ಥಾನಕ್ಕೆ ಆಂಧ್ರದ ಕೆ.ಎಸ್.ಭರತ್ ಆಯ್ಕೆ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಆರಂಭದಲ್ಲಿ ಭಾರತ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಶಕ್ತವಾಯಿತು. ಇನ್ನಿಂಗ್ಸ್ ನ ಮೊದಲ ಓವರ್ ಬೌಲಿಂಗ್ ಮಾಡಿದ ಪ್ಯಾಟ್ ಕಮ್ಮಿನ್ಸ್ ಮೇಡನ್ ಓವರ್ ಮಾಡಿದರು. ಆದರೆ ನಂತರ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಶಿಖರ್ ಧವನ್ ರನ್ ಗಳಿಕೆಗೆ ಆರಂಭ ನೀಡಿದರು. ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದ ಶಿಖರ್ ಧವನ್‍ಗೆ ರೋಹಿತ್ ಶರ್ಮಾ ಸಾಥ್ ನೀಡಿದರು.

ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ ಧವನ್ ಹಾಗೂ ರೋಹಿತ್ ಜೋಡಿಯು 55 ರನ್‍ಗಳಿಸಿತು. ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡಿದ ಈ ಜೋಡಿಯು ಮೊದಲ ವಿಕೆಟ್‍ಗೆ 81 ರನ್‍ಗಳ ಜೊತೆಯಾಟ ನೀಡಿತು. ರೋಹಿತ್ ಶರ್ಮಾ 42 ರನ್ (44 ಎಸೆತ, 6 ಬೌಂಡರಿ) ಗಳಿಸಿ ಆ್ಯಡಂ ಜಂಪಾಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಇನ್ನೂ ನಾಲ್ಕು ರನ್ ಗಳಿಸಿದ್ದಿದ್ದರೆ ವೇಗವಾಗಿ 9 ಸಾವಿರ ರನ್ ಗಳಿಸಿದ ಆಟಗಾರರಲ್ಲಿ ಮೂರನೇ ಸ್ಥಾನ ಪಡೆಯುತ್ತಿದ್ದರು.

Rohith

ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಮೊತ್ತದ ರನ್‍ಗಳ ಸವಾಲು ನೀಡುವ ಹಾಗೂ ವಿಕೆಟ್ ಕಾಯ್ದುಕೊಂಡು ಆಡುವ ಉದ್ದೇಶದಿಂದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಎರಡನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರು. ಆರಂಭಿಕ ಬ್ಯಾಟ್ಸ್‌ಮನ್‌ ಧವನ್ ಜೊತೆಗೆ ಸೇರಿದ ವಿರಾಟ್ ಉತ್ತಮ ಜೊತೆಯಾಟ ಕಟ್ಟಿದರು. ಉತ್ತಮ ಫಾರ್ಮ್ ನಲ್ಲಿದ್ದ ಶಿಖರ್ ಧವನ್ ಇನ್ನಿಂಗ್ಸ್ ನ 23ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು. ಧವನ್ ಹಾಗೂ ಕೊಹ್ಲಿ ಜೋಡಿ ಎರಡನೇ ವಿಕೆಟ್‍ಗೆ 103 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಕೊಡುಗೆ ನೀಡಿತು.

ಇನ್ನಿಂಗ್ಸ್ ನ 29ನೇ ಓವರ್ ನಲ್ಲಿ ಕೇನ್‌ ರಿಚ​ರ್ಡ್‌​ಸನ್‌ ಶಿಖರ್ ಧವನ್ ವಿಕೆಟ್ ಕಿತ್ತರು. ಶಿಖರ್ ಧವನ್ 96 ರನ್ (90 ಎಸೆತ, 13 ಬೌಂಡರಿ, ಸಿಕ್ಸ್) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ಶ್ರೇಯಸ್ ಅಯ್ಯರ್ 17 ಎಸೆತಗಳಲ್ಲಿ ಕೇವಲ 7 ರನ್‍ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿಕ್ಕ ಅವಕಾಶವನ್ನು ಶ್ರೇಯಸ್ ಅಯ್ಯರ್ ಕೈಚೆಲ್ಲಿಕೊಂಡರು.

5ನೇ ಕ್ರಮಾಂಕದಲ್ಲಿ ಮೈದಾಕ್ಕಿಳಿದ ಕೆ.ಎಲ್.ರಾಹುಲ್ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿ, ಈ ಬಾರಿಯೂ ತಮ್ಮ ಬ್ಯಾಟಿಂಗ್ ಕಲೆಯನ್ನು ತೋರಿದರು. ಈ ಜೋಡಿಯು ನಾಲ್ಕನೇ ವಿಕೆಟ್‍ಗೆ 78 ರನ್‍ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿತು. 78 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಆ್ಯಡಂ ಜಂಪಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿಸಿ ಮನೀಶ್ ಪಾಂಡೆ ಕೇವಲ 4 ರನ್ ಗಳಿಸಿ ಪೆವಿಲಿಯನ್‍ಗೆ ತೆರಳಿದರು.

ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆ.ಎಲ್.ರಾಹುಲ್ ಇನ್ನಿಂಗ್ಸ್ ನ 46ನೇ ಓವರ್‌ನ 3ನೇ ಎಸೆತವನ್ನು ಬೌಂಡರಿಗೆ ಅಟ್ಟಿ ಅರ್ಧಶತಕ ದಾಖಲಿಸಿದರು. ಅಷ್ಟೇ ಅಲ್ಲದೆ ನಂತರ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಇದೇ ಓವರ್ ನಲ್ಲಿ ಟೀಂ ಇಂಡಿಯಾ 300 ರನ್‍ಗಳ ಗಡಿದಾಡಿತು. ಕೆ.ಎಲ್.ರಾಹುಲ್ ಜೊತೆಗೂಡಿದ ರವೀಂದ್ರ ಜಡೇಜಾ ಕೂಡ ಉತ್ತಮ ಬ್ಯಾಟಿಂಗ್ ನಡೆಸಿದರು. ಕೊನೆಯ ಓವರ್ ನಲ್ಲಿ ರನ್ ಕದಿಯಲು ಮುಂದಾದ ಕೆ.ಎಲ್.ರಾಹುಲ್ ರನೌಟ್ ಆದರು. ಕೆ.ಎಲ್.ರಾಹುಲ್ 80 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ರವೀಂದ್ರ ಜಡೇಜಾ ಔಟಾಗದೆ 20 ರನ್ ಗಳಿಸಿದರು. ಆ್ಯಡಂ ಜಂಪಾ 50 ರನ್ ನೀಡಿ 3 ವಿಕೆಟ್ ಕಿತ್ತರೆ, ಕೇನ್‌ ರಿಚ​ರ್ಡ್‌​ಸನ್‌ 73 ರನ್ ನೀಡಿ 2 ವಿಕೆಟ್ ಪಡೆದರು.

ರನ್ ಏರಿದ್ದು ಹೇಗೆ?:
51 ಎಸೆತ- 50 ರನ್
103 ಎಸೆತ – 100 ರನ್
199 ಎಸೆತ – 200 ರನ್
241 ಎಸೆತ – 250 ರನ್
274 ಎಸೆತ – 300 ರನ್
300 ಎಸೆತ – 340 ರನ್

Share This Article