ಧಾರವಾಡ: ಕಳೆದ 3,400 ವರ್ಷದ ಹಳೆಯದಾದ ಮಗುವಿನ ಶವ ಪೆಟ್ಟಿಗೆಯೊಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಳ್ಳಾರಿ ಪ್ರಾಚ್ಯಶಾಸ್ತ್ರದ ಮ್ಯೂಸಿಯಂಗೆ ಹೋಗಿದೆ.
ಇದು ನವಶಿಲಾಯುಗದ ಇತಿಹಾಸವನ್ನು ತೆರೆದಿಡುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಯಾಗಿದೆ. ಸಾರ್ಕೋಫಾಗಸ್ ಎನ್ನಲಾಗುವ ಈ ಶವ ಪೆಟ್ಟಿಗೆ ಬಳ್ಳಾರಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಬಳ್ಳಾರಿಯ ಕುಡತಿನ್ನಿ ಥರ್ಮಲ್ ಪ್ಲಾಂಟ್‍ನ ಕೆಲಸ ಮಾಡುತ್ತಿದ್ದಾಗ ಆ ಮಣ್ಣಿನಲ್ಲಿ ಸಾರ್ಕೋಫಾಗಸ್ ಸಿಕ್ಕಿತ್ತು. ಥರ್ಮಲ್ ಪ್ಲಾಂಟ್‍ನ ಕೆಲಸದ ವೇಳೆ ಚಿಕ್ಕ ಚಿಕ್ಕ ಮಣ್ಣಿನ ಗಡಿಗೆಗಳನ್ನು ಆಧರಿಸಿ ಉತ್ಖನನ ಮಾಡಿದಾಗ ಸಿಕ್ಕಿದ್ದ ಈ ಶವ ಪೆಟ್ಟಿಗೆಯಲ್ಲಿ 7 ವರ್ಷದ ಮಗುವಿನ ಅಸ್ಥಿಗಳಿದ್ದವು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ರವಿ ಕೋರಿಶಟ್ಟರ್ ಮಾಹಿತಿ ನೀಡಿದ್ದರು.
ಇದು ಅತ್ಯಂತ ಹಳೆಯ ಕಾಲದ್ದಾಗಿದ್ದರಿಂದ ಶವ ಪೆಟ್ಟಿಗೆ ಒಡೆದು ಹೋಗಿತ್ತು. ಆದರೆ ಅದನ್ನ ಧಾರವಾಡಕ್ಕೆ ತಂದಿದ್ದ ಕೋರಿಶೆಟ್ಟರ್ ಅವರು ದುರಸ್ತಿ ಮಾಡಿ ಮರುಜೋಡಿಸಿ ಕರ್ನಾಟಕ ವಿಶ್ವವಿದ್ಯಾಲಯ ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಇಟ್ಟಿದ್ದರು. ಆದರೆ ನಂತರ ಅದನ್ನ ಬಳ್ಳಾರಿಗೆ ಕಳಿಸಬೇಕಿದ್ದ ವಿಶ್ವವಿದ್ಯಾಲಯ ಕಳಿಸಿರಲೇ ಇಲ್ಲ. ಈ ಶವ ಪೆಟ್ಟಿಗೆ ಸಿಕ್ಕಿರುವ ಮಾಹಿತಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದ ಕಾರಣ, ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಈಗ ಪತ್ರ ಬರೆದು ಶವ ಪೆಟ್ಟಿಗೆಯನ್ನು ವಾಪಸ್ ತರಿಸಿಕೊಂಡಿದ್ದಾರೆ.
ಈಗ ಬಳ್ಳಾರಿಯಲ್ಲಿ ಕಟ್ಟಲಾಗಿರುವ ಪ್ರಾಚ್ಯಶಾಸ್ತ್ರ ಮ್ಯೂಸಿಯಂ ಜನವರಿ 26 ರಂದು ಉದ್ಘಾಟನೆಗೊಳ್ಳಲಿದ್ದು, ಅಲ್ಲಿ ಇದನ್ನ ಇಡಲಾಗಿದೆ. ಸದ್ಯ ಕೋರಿಶೆಟ್ಟರ್ ಅವರು ಕಂಡು ಹಿಡಿದಿದ್ದ ಈ ಶವ ಪೆಟ್ಟಿಗೆ ಜನವರಿ 26 ರಿಂದ ಎಲ್ಲರಿಗೆ ನೋಡಲು ಸಿಗಲಿದೆ. ಅದರ ಜೊತೆಗೆ ಉಳಿದ ಹಳೆಯ ಕಾಲದ ಐತಿಹಾಸಿಕ ವಸ್ತುಗಳು ಕೂಡ ಅಲ್ಲಿ ನೋಡಲು ಸಿಗಲಿವೆ.