ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ನಾಗಾರಾಧನೆಯ ಕೇಂದ್ರ ಘಾಟಿ ಸುಬ್ರಮಣ್ಯ. ಇಲ್ಲಿ ಸುಬ್ರಮಣ್ಯನನ್ನು ನಾಗದೇವರ ರೂಪದಲ್ಲಿ ಪೂಜಿಸಲಾಗುತ್ತಿದೆ. ದೇಶ ವಿದೇಶಗಳ ಲಕ್ಷಾಂತರ ಭಕ್ತರು ಇಲ್ಲಿ ದರ್ಶನ ಪಡೆಯುತ್ತಾರೆ. ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.
ದಿನ ನಿತ್ಯ ಘಾಟಿ ಸುಬ್ರಮಣ್ಯಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರದಿಂದ ಘಾಟಿಗೆ ಬಿಎಂಟಿಸಿ ಬಸ್ ಸಂಚಾರ ಸೇವೆಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಬೆಂಗಳೂರು ಗ್ರಾಮೀಣ ಡಿಸಿ ಪಿ.ಎನ್.ರವೀಂದ್ರ ಸೇರಿದಂತೆ ಬಿಎಂಟಿಸಿ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎರಡು ಮಾರ್ಗಗಳಲ್ಲಿ ಬಸ್ ಸಂಚಾರ ಮಾಡಲಿದ್ದು, ಯಾವ ಯಾವ ಸಮಯಕ್ಕೆ ಬಸ್ ಸಂಚಾರ ಲಭ್ಯ ಎಂಬ ಮಾಹಿತಿ ಇಲ್ಲಿದೆ. ದೊಡ್ಡಬಳ್ಳಾಪುರ ದಿಂದ ಘಾಟಿಗೆ ಬೆಳಗ್ಗೆ 8:15, ಮಧ್ಯಾಹ್ನ 1:50 ಹಾಗೂ 3:40ಕ್ಕೆ ಬಸ್ ಸೇವೆ ಲಭ್ಯವಿದೆ. ಘಾಟಿಯಿಂದ ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 9:35, ಮಧ್ಯಾಹ್ನ 2:45 ಹಾಗೂ 5:00 ಗಂಟೆಗೆ ಪ್ರಯಾಣಿಕರಿಗೆ ಬಸ್ ಸೇವೆ ಲಭ್ಯವಿದೆ.