ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ.
ಜನವರಿ ತಿಂಗಳಲ್ಲಿ ಸಿಎಂ ವರು ಕೇಂದ್ರ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ 5 ದಿನಗಳ ಕಾಲ ಪ್ರವಾಸ ಹೊರಡುತ್ತಿದ್ದಾರೆ. ಸಿಎಂ, ಸರ್ಕಾರಿ ಕೆಲಸದ ನಿಮಿತ್ತ ಜನವರಿ 21ರಿಂದ 25ರವರೆಗೆ 5 ದಿನಗಳ ಕಾಲ ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಜನವರಿ ತಿಂಗಳಿನಲ್ಲಿ ಹೇಳಿ ಕೇಳಿ ಚಳಿ ಹೆಚ್ಚು ಇರಲಿದೆ. ಅದರಲ್ಲೂ ಈ ಸಮಯದಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ತಾಪಮಾನ 2 ರಿಂದ 7 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ. ಹಾಗಾಗಿ ಸಿಎಂ ಯಡಿಯೂರಪ್ಪ ಸ್ವಿಟ್ಜರ್ಲ್ಯಾಂಡ್ ಚಳಿ ತಡೆದುಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬೆಚ್ಚನೆಯ ಉಡುಪುಗಳನ್ನು ತರಿಸಿಕೊಂಡಿದ್ದಾರೆ. ತಲೆಗೆ ಬೆಚ್ಚನೆಯ ಟೋಪಿ, ಸ್ವೆಟರ್, ಜಾಕೆಟ್, ಕೈ ಕಾಲುಗಳಿಗೆ ಗ್ಲೌಸ್ ಗಳನ್ನು ಸಿಎಂಗಾಗಿ ಖರೀದಿಸಲಾಗಿದೆ.
ಸ್ವಿಟ್ಜರ್ಲ್ಯಾಂಡ್ ನ ಡಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಸಚಿವರ ಜೊತೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಕೂಡ ಭಾಗವಹಿಸಲಿದ್ದಾರೆ. ಸಭೆಗೆ ಮಧ್ಯಪ್ರದೇಶ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ.
ಅಪರೂಪಕ್ಕೆ ವಿದೇಶ ಪ್ರವಾಸ:
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿದೇಶ ಪ್ರವಾಸ ಅಂದ್ರೆ ಅಷ್ಟಕ್ಕಷ್ಟೇ. ಇದೂವರೆಗೆ 2-3 ಬಾರಿ ಮಾತ್ರ ಯಡಿಯೂರಪ್ಪ ವಿದೇಶ ಪ್ರವಾಸ ಮಾಡಿದ್ದಾರೆ ಅಷ್ಟೇ. 2011ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಆಗಿದ್ದಾಗ 6 ದಿನಗಳ ಕಾಲ ಯಡಿಯೂರಪ್ಪ ಮಾರಿಷಸ್ ದೇಶಕ್ಕೆ ಪ್ರಯಾಣ ಮಾಡಿದ್ದರು. ಮಕ್ಕಳು, ಮೊಮ್ಮಕ್ಕಳ ಜೊತೆ ಯಡಿಯೂರಪ್ಪ ಮಾರಿಷಸ್ ನಲ್ಲಿ ಕಳೆದು ಬಂದಿದ್ದರು.