ಮೈಸೂರು: ಏಸು ಪ್ರತಿಮೆ ಸ್ಥಾಪನೆಗೆ ಕನಕಪುರ ಹಾರೋಬೆಲೆಯಲ್ಲಿ ಜಮೀನು ನೀಡಿರುವ ವಿಚಾರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಡೆಗೆ ಮಾಜಿ ಸಂಸದ ಧೃವನಾರಾಯಣ್ ಬೆಂಬಲ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧೃವನಾರಾಯಣ್, ತಾವು ಬಾಲ್ಯದಲ್ಲಿ ಅಸ್ಪೃಶ್ಯತೆ ವಿಚಾರದಲ್ಲಿ ಅನುಭವಿಸಿದ ನೋವಿನ ಬಗ್ಗೆ ಬೇಸರದಿಂದ ಮಾತನಾಡಿದರು. ಅಸ್ಪೃಶ್ಯತೆ ನೋವುಂಡವರಿಗೆ ಮಾತ್ರ ಅದರ ನೋವು ಗೊತ್ತು. ನಾನು ಬಾಲ್ಯದಲ್ಲಿ ಅಸ್ಪೃಶ್ಯತೆಗೆ ಒಳಗಾಗಿದ್ದೆ ಎಂದು ತಮ್ಮ ನೋವನ್ನು ಬಿಚ್ಚಿಟ್ಟರು.
ನಾನು ಸೆಂಟ್‍ಫಿಲೋಮಿನ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾಗ ಅಸ್ಪೃಶ್ಯತೆ ನೋವಿಗೆ ಒಳಗಾಗಿದ್ದೆ. 5ನೇ ತರಗತಿ ಓದುತ್ತಿದ್ದ ನಾನು ಹಾಸ್ಟೆಲ್‍ಗೆ ಹೋದ ಮೊದಲ ದಿನವೇ ಸಹಪಾಠಿಯೊಬ್ಬ ನನ್ನ ಜಾತಿ ಕೇಳಿದ್ದರು. ಹಾಸ್ಟೆಲ್ ಕೋಣೆಯಲ್ಲಿ ಬ್ಯಾಗ್ ಇಟ್ಟು ಬರುತ್ತಿದ್ದ ನನಗೆ ವಿದ್ಯಾರ್ಥಿಯೊಬ್ಬ ನೀನು ಯಾವ ಜಾತಿಯವ ಎಂದು ಕೇಳಿದ್ದ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಇದ್ದ ಏಕೈಕ ದಲಿತ ವಿದ್ಯಾರ್ಥಿ ನಾನಾಗಿದ್ದೆ. ಈ ರೀತಿ ಯಾರು ಅಸ್ಪೃಶ್ಯತೆಗೆ ಒಳಗಾಗಿಲ್ಲವೋ ಅವರಿಗೆ ಅದು ಗೊತ್ತಾಗುವುದಿಲ್ಲ ಎಂದು ಜಾತಿ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಬ್ಬದ ಸಂದರ್ಭದಲ್ಲಿ ಸಮುದಾಯಕ್ಕೆ ನೋವುಂಟು ಮಾಡುವುದು ಸಮಂಜಸವಲ್ಲ. ಆದ್ದರಿಂದ ನಾನು ಬಿಜೆಪಿ ನಾಯಕರಿಗೆ ಸಲಹೆ ನೀಡುತ್ತಿದ್ದೇನೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದು, ಉತ್ತಮ ಆಡಳಿತ ನೀಡುವ ಅವಕಾಶ ಲಭಿಸಿದೆ. ಆದ್ದರಿಂದ ಇಂತಹ ಸಂಗತಿಗಳನ್ನು ರಾಜಕೀಯ ಮಾಡುವುದನ್ನು ಬಿಡಬೇಕು. ಆ ಗ್ರಾಮದಲ್ಲಿ ಶೇ.90 ರಷ್ಟು ಒಂದೇ ಧರ್ಮದವರಿದ್ದು, ಅವರ ಬೇಡಿಕೆಯಂತೆ ಸ್ಥಳೀಯ ಶಾಸಕರು ಕಾನೂನಿನ ಅಡಿ ಜಮೀನು ಮಂಜೂರು ಮಾಡಿದ್ದಾರೆ. ಒಂದು ಧರ್ಮದ ವಿರುದ್ಧ ವೈಷಮ್ಯ ಮೂಡಿಸುವ ಮೂಲಕ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.