-ಕಾರ್ಗೆ ಗ್ರಹಣ ದೋಷ ಪರಿಹಾರ ಪೂಜೆ
ಬೆಂಗಳೂರು: ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ನಾಲ್ಕು ತಿಂಗಳ ಬಳಿಕ ಹೊಸ ಕಾರಿನಲ್ಲಿ ಓಡಾಟ ಪ್ರಾರಂಭ ಮಾಡಿದ್ದಾರೆ. ಸಿಎಂ ಆದ ನಂತರವೂ ವಿಪಕ್ಷ ನಾಯಕನಾಗಿ ಬಳಸುತ್ತಿದ್ದ ಕಾರ್ ನ್ನು ಸಿಎಂ ಯಡಿಯೂರಪ್ಪ ಬಳಸುತ್ತಿದ್ದರು. ಮುಖ್ಯಮಂತ್ರಿಗಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಹೊಸ ಕಾರ್ ಇಲಾಖೆಯಿಂದ ಖರೀದಿ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಅವರು ಕಾರ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ಹಳೆ ಕಾರ್ ನಲ್ಲಿ ಓಡಾಟ ಮಾಡುತ್ತಿದ್ದರು.
ಒಂದು ವಾರದ ಹಿಂದೆ ಸಿಎಂ ಯಡಿಯೂರಪ್ಪ ಹೊಸ ಫಾರ್ಚೂನರ್ ಕಾರ್ ನ್ನ ರಿಜಿಸ್ಟ್ರೇಷನ್ ಮಾಡಿಸಿ ಓಡಾಟ ಮಾಡ್ತಿದ್ದಾರೆ. ಇವತ್ತು ಗ್ರಹಣ ಮುಗಿದ ಬಳಿಕ ಹೊಸ ಕಾರ್ ಗೆ ಸಿಬ್ಬಂದಿ ಪೂಜೆ ಸಲ್ಲಿಸಿದರು. ಗರಿಕೆ, ದರ್ಬೆ, ನಿಂಬೆಹಣ್ಣು ಇಟ್ಟು ಪೂಜೆ ಸಲ್ಲಿಕೆ ಮಾಡಿ ಗ್ರಹಣ ದೋಷ ಪರಿಹಾರ ಮಾಡಿದರು.
ಯಡಿಯೂರಪ್ಪರವರು ದೈವದಲ್ಲಿ, ಸಂಖ್ಯಾಶಾಸ್ತ್ರದಲ್ಲಿ ಹೆಚ್ಚು ನಂಬಿಕೆ ಇಟ್ಟವರು. ಹೀಗಾಗಿ ತಮ್ಮ ವಾಹನಕ್ಕೆ ಸಂಖ್ಯಾಶಾಸ್ತ್ರದ ಪ್ರಕಾರವೇ ನಂಬರ್ ಆಯ್ಕೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಲಕ್ಕಿ ನಂಬರ್ 9 ಅಂತ ಹೇಳಲಾಗ್ತಿದೆ. ಹೀಗಾಗಿ ತಾವು ಓಡಾಡಲು ಬಳಸುತ್ತಿರೋ ಕಾರ್ ನಂಬರ್ ಕೂಡಿದ್ರೆ 9 ಸಂಖ್ಯೆಯೇ ಬರುತ್ತೆ. ಹೊಸ ಫಾರ್ಚೂನರ್ ಕಾರ್ ನಂಬರ್ ಕೆಎ.03.ಜಿಎಂ.4545 ರಿಜಿಸ್ಟರ್ ಮಾಡಿಸಲಾಗಿದೆ. ಅಂತಿಮವಾಗಿ ಸಂಖ್ಯೆಯನ್ನ ಕೂಡಿದರೆ 9 ಬರುತ್ತದೆ. ಮೊದಲಿನಿಂದಲೂ ಯಡಿಯೂರಪ್ಪನವರು 4545 ನಂಬರ್ ಕಾರ್ ಬಳಸುತ್ತಿದ್ದಾರೆ.