3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ- ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

Public TV
1 Min Read
CKB ACB RAID A

ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲಾ ಬರೋಬ್ಬರಿ 3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ದೂರುದಾರ ಬಾಗೇಪಲ್ಲಿ ಪಟ್ಟಣದ ಗರುಡಾದ್ರಿ ಡ್ರಿಪ್ ಇರಿಗೇಷನ್ ಎಂಟರ್‌ಪ್ರೈಸರ್ಸ್‌ ಮಾಲೀಕ ಲಕ್ಷ್ಮೀನರಸಿಂಹಯ್ಯ ಅವರ ಬಳಿ ಚಂದ್ರಶೇಖರ್ 3,72000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

CKB ACB RAID

ಲಕ್ಷ್ಮೀನರಸಿಂಹಯ್ಯ ರೈತರ ಜಮೀನುಗಳಿಗೆ ಸರ್ಕಾರಿ ಸಬ್ಸಿಡಿ ಸೌಲಭ್ಯದ ಡ್ರಿಪ್ ಸಿಸ್ಟಂ ಅಳವಡಿಕೆ ಯೋಜನೆ ಅಡಿ ಹನಿ ನೀರಾವರಿ ಪದ್ಧತಿ ಅನುಷ್ಠಾನಗೊಳಿಸಿದ್ದರು. ಇದರ ಮೊತ್ತ ಸರಿ ಸುಮಾರು 16 ಲಕ್ಷ ರೂಪಾಯಿಗಳಾಗಿದ್ದು, ಆ ಹಣ ಕೃಷಿ ಇಲಾಖೆಯಿಂದ ಬಿಡುಗಡೆ ಆಗಬೇಕಿತ್ತು. ಹೀಗಾಗಿ ಹಣ ಬಿಡುಗಡೆಗೆ ಸಹಿ ಹಾಕಲು ಸಹಾಯಕ ನಿರ್ದೇಶಕ ಚಂದ್ರಶೇಖರ್ ಒಟ್ಟು ಮೊತ್ತದಲ್ಲಿ ಶೇ. 22ರಷ್ಟು ಕಮೀಷನ್ ಕೊಡಬೇಕು ಎಂದು ಹೇಳಿದ್ದ. ಅದರಂತೆ ಮೊದಲು 50,000 ರೂಪಾಯಿ ಮುಂಗಡ ಹಣ ಕೊಟ್ಟಿದ್ದ ಲಕ್ಷ್ಮೀನರಸಿಂಹಯ್ಯ ಎರಡನೇ ಕಂತಿನ 50,000 ರೂಪಾಯಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಚಂದ್ರಶೇಖರ್ ಅವರನ್ನು ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ. ಎಸಿಬಿ ಡಿವೈಎಸ್‍ಪಿ ವೆಂಕಟೇಶ್ ನಾಯುಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಸಿಬಿ ಇನ್ಸ್‍ಪೆಕ್ಟರ್ ಲಕ್ಷ್ಮಿದೇವಮ್ಮ ಸೇರಿ ಕೆಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *