ಮೈಸೂರು: ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ನಡೆಸಿದ ಪೊಲೀಸರನ್ನು ಟೀಕಿಸುವುದು ಸರಿಯಲ್ಲ ಎಂದು ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಅತ್ಯಾಚಾರಿಗಳನ್ನು ಹೈದರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದ ಬಗ್ಗೆ ಬಹುತೇಕರು ಹರ್ಷ ವ್ಯಕ್ತಪಡಿಸುತ್ತಿದ್ದರೆ ಕೆಲವರು ಈ ಎನ್‍ಕೌಂಟರ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ವಿಚಾರದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅತ್ಯಾಚಾರದ ಪ್ರಕರಣಗಳು ಯಾರಿಗೂ ಸಂತೋಷ ತರಲ್ಲ. ಈಗ ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ನಡೆದಿರುವುದು ಸಮಾಧಾನ ತಂದಿದೆ ಎಂದು ಹೇಳುವ ಮೂಲಕ ಪೊಲೀಸರ ಪರ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಟಿ ವೇಳೆ ಈ ಘಟನೆ ನಡೆದಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದಾಗ ಪೊಲೀಸರು ಸಹಜವಾಗಿಯೇ ಆ ಸಂದರ್ಭದಲ್ಲಿ ಅವರು ಎನ್‍ಕೌಂಟರ್ ಮಾಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವು ಬಗೆಹರಿಯಬೇಕು ಎಂಬ ಆಸೆ ಇದೆ. ಈಗ ಆಗಿರುವ ಎನ್‍ಕೌಂಟರ್ ಕೂಡ ಕಾನೂನು ಪ್ರಕಾರ ಆಗಿದ್ದರೆ ಅದರಲ್ಲಿ ತಪ್ಪಿಲ್ಲ. ಅತ್ಯಾಚಾರದಂಥ ಪ್ರಕರಣಗಳಲ್ಲಿ ಕಾನೂನು ಬದಲಾವಣೆಗಿಂತ ತ್ವರಿತವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಬೇಕು. ಇದು ಎಲ್ಲ ಜನರ ಭಾವನೆ ಎಂದು ಹೇಳಿದರು. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ
ಎನ್‍ಕೌಂಟರ್ ಮಾಡಿರುವುದು ತಪ್ಪು ಎಂದವರ ವಿರುದ್ಧ ಮೈಸೂರಿನ ಅಗ್ರಹಾರದ ವೃತ್ತದಲ್ಲಿ ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಮನೇಕಾ ಗಾಂಧಿ, ಕಾರ್ತಿ ಚಿದಂಬರಂ, ಕೇಜ್ರಿವಾಲ್ ವಿರುದ್ಧ ಪ್ರತಿಭಟಿಸಿ ಧಿಕ್ಕಾರ ಕೂಗಿದರು. ಈ ಮೂಲಕ ಹೈದರಾಬಾದ್ ಪೊಲೀಸರ ಕ್ರಮ ಸರಿಯಾಗಿಯೇ ಇದೆ ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್