‘ಮಹಾ’ ಬಹುಮತ ಸಾಬೀತು- ಉದ್ಧವ್ ಸರ್ಕಾರಕ್ಕೆ 169 ಶಾಸಕರ ಬೆಂಬಲ

Public TV
2 Min Read
uddhav thakarey

ಮುಂಬೈ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ನಂತರ ವಿಶ್ವಾಸ ಮತವೆಂಬ ಅಗ್ನಿ ಪರೀಕ್ಷೆಯನ್ನು ಮಹಾ ಮೈತ್ರಿ ಗೆದ್ದಿದೆ.

ಮಹಾರಾಷ್ಟ್ರ ರಾಜಕಾರಣದ ಕುರಿತು ಇಡೀ ದೇಶವೇ ಚರ್ಚೆಯಲ್ಲಿ ಮುಳುಗಿತ್ತು. ಈ ಎಲ್ಲ ಚರ್ಚೆಗಳ ಮಧ್ಯೆ ಉದ್ಧವ್ ಠಾಕ್ರೆ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸದನದಲ್ಲಿಯೂ ಭಾರೀ ಗದ್ದಲ ಹಾಗೂ ಬಿಜೆಪಿಯ ಸಭಾತ್ಯಾಗದ ಮಧ್ಯೆ ಠಾಕ್ರೆ ವಿಶ್ವಾಸ ಮತ ಸಾಬೀತು ಪಡಿಸಿದ್ದಾರೆ. ಈ ಮೂಲಕ ಉದ್ಧವ್ ನೇತೃತ್ವದ ಮೈತ್ರಿ ಸರ್ಕಾರ ಅಗ್ನಿ ಪರೀಕ್ಷೆಯನ್ನು ಗೆದ್ದಂತಾಗಿದೆ.

ಹಂಗಾಮಿ ಸ್ಪೀಕರ್ ದಿಲೀಪ್ ವಾಸ್ಲೆ ಪಾಟೀಲ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಹುಮತ ಸಾಬೀತುಪಡಿಸಿದರು. ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇನ್ನು 1 ಎಂಎನ್‍ಎಸ್, 2ಎಐಎಂಐಎಂ, 1 ಸಿಪಿಐಎಂ ಶಾಸಕರು ತಮ್ಮ ಬೆಂಬಲವನ್ನು ಸೂಚಿಸದೇ ತಟಸ್ಥವಾಗಿದ್ದರು.

ಸ್ಪೀಕರ್ ಅವರನ್ನು ನಿಯಮಬದ್ಧವಾಗಿ ಆಯ್ಕೆ ಮಾಡಲಾಗಿಲ್ಲ, ಈ ರೀತಿಯ ಪರಿಸ್ಥಿತಿ ಹಿಂದೆಂದೂ ಆಗಿರಲಿಲ್ಲ. ಉದ್ಧವ್ ಠಾಕ್ರೆ ಸಹ ಅಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿತು. ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ. ಸ್ಪೀಕರ್ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದರು. ನಂತರ ಬಿಜೆಪಿಯ 105 ಶಾಸಕರು ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಸಭಾತ್ಯಾಗ ಮಾಡಿ ಹೊರ ನಡೆದರು.

ಬಹುಮತ ಸಾಬೀತಿಗೆ 145 ಸ್ಥಾನಗಳ ಅಗತ್ಯವಿತ್ತು. ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಮೂರು ಪಕ್ಷದ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದ ಕಾರಣ ಸಹಜವಾಗಿಯೇ ಠಾಕ್ರೆಯವರು ಬಹುಮತ ಸಾಬೀತು ಪಡಿಸಿದರು. ಈ ಮೂಲಕ 105 ಸ್ಥಾನಗಳನ್ನು ಗಳಿಸಿದ್ದರೂ ಸಹ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತಾಯಿತು.

ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ `ಮಹಾವಿಕಾಸ್ ಅಘಾಡಿ’ ಸರ್ಕಾರ ರಚನೆಯಾಗಿದೆ. ಮುಂಬೈನ ಶಿವಾಜಿ ಪಾರ್ಕಿನಲ್ಲಿ ಸಂಜೆ 6.30ಕ್ಕೆ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಿವಾಜಿ ಸಾಕ್ಷಿಯಾಗಿ, ಸಾವಿರಾರು ಶಿವಸೈನಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ಸುಮಾರು 40 ವರ್ಷಗಳ ಶಿವಸೇನೆಯ ರಾಜಕೀಯ ಇತಿಹಾಸದಲ್ಲಿ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿ ಉದ್ಧವ್ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ.

ಉದ್ಧವ್ ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳ ಹಿರಿಯ, ಅನುಭವಸ್ಥರಾದ ಶಿವಸೇನೆಯ ಏಕನಾಥ್ ಶಿಂಧೆ, ಸುಭಾಶ್ ದೇಸಾಯಿ, ಎನ್‍ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ಬಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ದಲಿತ ನಾಯಕ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ಯಾರೊಬ್ಬರೂ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *