-ಹಣ ಪಡೆದು ಬೈಕ್ ನೀಡಿದ ಪೊಲೀಸರು
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ್ನು ಆರಕ್ಷಕರೇ ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ರಾಜಾಜಿನಗರದಲ್ಲಿ ಇಂತಹದ್ದೊಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ವಾಹನ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಬೈಕ್ ಕಳ್ಳರ ಕಾಟ ಹೆಚ್ಚಾಗಿದೆ, ಇದರ ಬೆನ್ನಲ್ಲೇ ಇದೀಗ ಪೊಲೀಸರು ಸಹ ಬೈಕ್ ಕದಿಯಲು ಮುಂದಾಗಿದ್ದಾರಾ ಎಂಬ ಅನುಮಾನ ಮೂಡತೊಡಗಿದೆ.
ರಾಜಾಜಿನಗರದ ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಸಿದ್ದ ಬೈಕ್‍ನ್ನು ಪೊಲೀಸರೇ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೈಟ್ ರೌಂಡ್ಸ್ ನಲ್ಲಿದ್ದ ರಾಜಾಜಿನಗರ ಪೊಲೀಸರು ಕಾಂಪೌಂಡ್ ಒಳಗಿದ್ದ ಬೈಕ್ ಕಳವು ಮಾಡಿರುವುದು ಸಿಸಿಟಿವಿ ಮೂಲಕ ತಿಳಿದಿದೆ.
ರಾತ್ರಿ ಬೈಕ್ ನಿಲ್ಲಸಿದ್ದ ಮಾಲೀಕ ಮರುದಿನ ಬೆಳಗ್ಗೆ ಬೈಕ್ ಕಾಣದಿರುವುದನ್ನು ಕಂಡು ಗಾಬರಿಯಾಗಿದ್ದಾನೆ. ತಕ್ಷಣವೇ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ 300 ರೂ. ಪಡೆದು ಪೊಲೀಸರು ಬೈಕ್ ನೀಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದಾರೆ.
ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದು, ರಾತ್ರಿ ವೇಳೆ ಬೈಕ್‍ನ್ನು ರಸ್ತೆಯಲ್ಲೇ ನಿಲ್ಲಿಸಲಾಗಿತ್ತು. ನೈಟ್ ಬೀಟ್ ನಲ್ಲಿದ್ದ ಪೊಲೀಸರು ಇದನ್ನು ನೋಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಬೈಕ್‍ನ ಕೀ ಸಹ ವಾಹನದಲ್ಲೇ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬೈಕ್ ತೆಗೆದುಕೊಂಡು ಬಂದಿದ್ದಾರೆ ಎಂದು ಪೊಲೀಸರು ವಾದಿಸಿದ್ದಾರೆ.
ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಬೈಕ್‍ನ್ನು ಪೊಲೀಸರು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.