ನವದೆಹಲಿ: ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ನನ್ನನ್ನು ಶಾಪದಂತೆ ಕಾಡಿದರು ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್, ವಿಕೆಟ್ ಕೀಪರ್ ಅಡಮ್ ಗಿಲ್‍ಕ್ರಿಸ್ಟ್ ಹೇಳಿದ್ದಾರೆ.
ಆಡಮ್ ಗಿಲ್‍ಕ್ರಿಸ್ಟ್ ನವೆಂಬರ್ 14ರಂದು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನಾ ದಿನವಾದ ಇಂದು ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಯಾವಾಗಲೂ ಎದುರಿಸಲು ತೊಂದರೆ ಅನುಭವಿಸುತ್ತಿದ್ದ ಬೌಲರ್ ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು ಎಂದಿರುವ ಗಿಲ್‍ಕ್ರಿಸ್ಟ್ ಹರ್ಭಜನ್ ತಮ್ಮ ವೃತ್ತಿಜೀವನದ ಶಾಪವೆಂದು ಬಣ್ಣಿಸಿದ್ದಾರೆ.
ಗಿಲ್‍ಕ್ರಿಸ್ಟ್ 2001ರಲ್ಲಿ ಭಾರತದ ವಿರುದ್ಧದ ಸರಣಿಯನ್ನು ನೆನಪಿಸಿಕೊಂಡು, ಆಸ್ಟ್ರೇಲಿಯಾ ತಂಡವು ಸತತ 15 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಆಡಲು ಮುಂದಾಗಿತ್ತು. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಆದರೆ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೆಟ್ಟ ರೀತಿಯಲ್ಲಿ ಸೋಲಬೇಕಾಯಿತು. ಇದಕ್ಕೆ ದೊಡ್ಡ ಕಾರಣ ಭಾರತದ ಮೊದಲ ಟೆಸ್ಟ್ ಹ್ಯಾಟ್ರಿಕ್ ಸೇರಿದಂತೆ ಮೂರು ಪಂದ್ಯಗಳಲ್ಲಿ 32 ವಿಕೆಟ್ ಪಡೆದ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಂದು ತಿಳಿಸಿದ್ದಾರೆ.
ಈಡನ್ ಗಾರ್ಡನ್‍ನಲ್ಲಿ 18 ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಟೆಸ್ಟ್ ಪಂದ್ಯವು ಅನೇಕ ವಿಶೇಷತೆ ಹೊಂದಿದೆ. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್‍ಕ್ರಿಸ್ಟ್ ಶತಕ ಬಾರಿಸಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಅವರು ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಪ್ರತಿ ಬಾರಿಯೂ ಅವರು ಹರ್ಭಜನ್ ಸಿಂಗ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳುತ್ತಿದ್ದರು.
ಆ ಟೆಸ್ಟ್ ಸರಣಿಯಲ್ಲಿ ಹರ್ಭಜನ್ ಸಿಂಗ್ ಕಾಡಿದರು. ಅಷ್ಟೇ ಅಲ್ಲದೆ ನನ್ನ ವೃತ್ತಿ ಜೀವನದುದ್ದಕ್ಕೂ ಹರ್ಭಜನ್ ನನಗೆ ಶಾಪವಾಗಿದರು. ನನ್ನ ದೃಷ್ಟಿಯಲ್ಲಿ, ಹರ್ಭಜನ್ ಸಿಂಗ್ ಮತ್ತು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಹೆಚ್ಚು ಕಷ್ಟಪಟ್ಟಿದ್ದೇನೆ ಎಂದು ಗಿಲ್‍ಕ್ರಿಸ್ಟ್ ನೆನಪಿಸಿಕೊಂಡಿದ್ದಾರೆ.
ಈಡನ್ ಗಾರ್ಡನ್ಸ್ ಟೆಸ್ಟ್ ವೇಳೆ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು. ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತ್ತು. ಹಾಗೆಯೇ ಈ ಪಂದ್ಯದಲ್ಲೂ ಅವರು ಭಾರತವನ್ನು ಸೋಲಿಸಲು ಮುಂದಾಗಿತ್ತು. ಮೊದಲ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡವು ನೀಡಿದ್ದ 445 ರನ್‍ಗಳ ಗುರಿ ಬೆನ್ನಟ್ಟಿದ್ದ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವನ್ನು ಕೇವಲ 171 ರನ್ ಗಳಿಸಲು ಶಕ್ತವಾಗಿತ್ತು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಜೋಡಿ ನಂತರ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಎರಡನೇ ವಿಕೆಟಿಗೆ 376 ರನ್‍ಗಳ ದಾಖಲೆಯ ಜೊತೆಯಾಟವಾಡಿ ಭಾರತ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು. ಲಕ್ಷ್ಮಣ್ 281 ರನ್ ಹೊಡೆಯುವ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ ಎನ್ನುವ ದಾಖಲೆ ಬರೆದಿದ್ದರು. 2004ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ಮುಲ್ತಾನಿನಲ್ಲಿ ನಡೆದ ಪಂದ್ಯದಲ್ಲಿ ತ್ರಿಶಕತ ಸಿಡಿಸಿ ವಿವಿಎಸ್ ಲಕ್ಷ್ಮಣ್ ದಾಖಲೆ ಮುರಿದಿದ್ದರು.