– ಹೆಚ್‍ಡಿಕೆಯ ಒಳ್ಳೆಯ ಮಾತನ್ನು ಸ್ವಾಗತ ಮಾಡುವುದು ನನ್ನ ಕರ್ತವ್ಯ
– ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ
ಬೆಂಗಳೂರು: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರ ಒಳ್ಳೆಯ ಮಾತುಗಳನ್ನು ಸ್ವಾಗತ ಮಾಡುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸರ್ಕಾರ ರಚನೆಯಾಗಿ 100 ದಿನದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯ ಸಮಯದಲ್ಲಿ ಆಡಳಿತ ಪಕ್ಷವನ್ನು ಬೀಳಿಸುವುದು ಬೇಡ ಎಂದು ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಒಳ್ಳೆಯ ಮಾತುಗಳನ್ನು ಸ್ವಾಗತ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ಈ ಹಿಂದೆ ಸದನದಲ್ಲಿ ಜೆಡಿಎಸ್ ಅಪ್ಪಮಕ್ಕಳನ್ನು ಸೆದೆಬಡಿಯುವುದೇ ನನ್ನ ಹೋರಾಟ ಎಂದು ನೀವು ಹೇಳಿದ್ದೀರಿ ಎನ್ನುವ ಪ್ರಶ್ನೆಗೆ, ಆಗ ನಾನು ಹಾಗೇ ಹೇಳಿದ್ದು ನಿಜ. ಆದರೆ ಈಗ ಅಪ್ಪ, ಮಕ್ಕಳು ಸುಧಾರಿಸಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ನನ್ನ ಹೇಳಿಕೆಯನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ. ಕುಮಾರಸ್ವಾಮಿ ಅವರ ಹೇಳಿದ ಮಾತು ನಮಗೆ ಪಕ್ಷಕ್ಕೆ ಮತ್ತು ರಾಜ್ಯದ ಜನರಿಗೆ ಅನೂಕಲಕರವಾಗಿದೆ. ಹಾಗಾಗಿ ನಾನು ಅವರ ಹೇಳಿಕೆಯನ್ನು ಸ್ವಾಗತ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಅಂದು ದುಷ್ಮನ್ ಇಂದು ಭಾಯಿ ಭಾಯಿ – ಬಿಎಸ್‍ವೈ ಕೈ ಕುಲುಕಿದ ಎಚ್‍ಡಿಕೆ
ಉಪಚುನಾವಣೆಯ ಬಳಿಕ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಳಿದಾಗ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೇ ಬರುವುದಿಲ್ಲ. ನಾನು ಸ್ವಾಭಿಮಾನ ಮರೆತು ಜೆಡಿಎಸ್ ಜೊತೆ ಹೋಗಲ್ಲ. ಉಪಚುನಾವಣೆಯಲ್ಲಿ ಜಯ ಸಾಧಿಸಿ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ವಿರೋಧ ನಾಯಕ ಸಿದ್ದರಾಮಯ್ಯ ಅವರ ಮೇಲೆ ಕಿಡಿಕಾರಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಮಾತಿಗೆ ಕವಡೆ ಕಾಸಿ ಕಿಮ್ಮತ್ತಿಲ್ಲ. ಅವರ ಮಾತಿಗೆ ಬೆಲೆ ಕೊಡುವ ಕೆಲಸವನ್ನು ನೀವು ಯಾಕೆ ಮಾಡುತ್ತಿರಾ? ಸಿದ್ದರಾಮಯ್ಯ ಹೇಳಿದ ರೀತಿಯಲ್ಲಿ ನಾನು ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ನನಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷದವರು ವಿರೋಧಿಗಳಲ್ಲ. ಅಡಳಿತ ಪಕ್ಷವಾಗಿ ನಾನು ಎಲ್ಲರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.