ಪ್ರಧಾನಿ ಅಣ್ಣನ ಮಗಳ ಪರ್ಸ್ ಗೆ ಇರುವ ಬೆಲೆ ವಿದ್ಯಾರ್ಥಿಯ ಜೀವಕ್ಕಿಲ್ವಾ: ಕನ್ನಯ್ಯ ಪ್ರಶ್ನೆ

Public TV
2 Min Read
Kanhaiya kumar Modi

– ಉಪನ್ಯಾಸ ತಡೆದು ಮತ್ತಷ್ಟು ಪ್ರಚಾರ ಕೊಟ್ರು
– ಮೋದಿ, ಬಿಜೆಪಿ ವಿರುದ್ಧ ಕನ್ನಯ್ಯ ಕಿಡಿ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅಣ್ಣನ ಮಗಳ ಪರ್ಸ್ ಗೆ ಇರುವ ಬೆಲೆ ವಿದ್ಯಾರ್ಥಿಯ ಜೀವಕ್ಕೆ ಇಲ್ವಾ ಎಂದು ಜೆಎನ್‍ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅಣ್ಣನ ಪುತ್ರಿ ದಮಯಂತಿ ಬೆನ್ ಮೋದಿ ಅವರ ಪರ್ಸ್ ಅನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದರು. ಆ ಕಳ್ಳರಿಗಾಗಿ ಏಳು ನೂರು ಪೊಲೀಸರು ಶೋಧ ಕಾರ್ಯ ನಡೆಸಿ ಬಂಧಿಸಿದ್ದಾರೆ. ಆದರೆ ಜೆಎನ್‍ಯು ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಹುಡುಕುವ ಕೆಲಸ ಆಗುತ್ತಿಲ್ಲ.  ನಜೀಬ್ ತಾಯಿ ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದರೆ ಆ ವಿದ್ಯಾರ್ಥಿಯ ಜೀವಕ್ಕೆ ಬೆಲೆ ಇಲ್ವಾ ಎಂದು ಕಿರಿಕಾರಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಸಹೋದರನ ಪುತ್ರಿಯ ಪರ್ಸ್ ಎಗರಿಸಿದ ಖದೀಮರು

JNU SUSTUDENT Najeeb

ನಜೀಬ್ ನಾಪತ್ತೆ ಪ್ರಕರಣ ಸಂಬಂಧ ಯಾವುದೇ ಮಾಹಿತಿ ಸಿಗುತ್ತಿಲ್ಲ ಅಂತ ಸಿಬಿಐ ಹೇಳುತ್ತಿದೆ. ಒಂದು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಸಿಬಿಐ ಯಾಕಿದೆ? ಬಿಜೆಪಿ ವಿರುದ್ಧ ಮಾತನಾಡುವವರ ಮನೆಯ ಮೇಲೆ ದಾಳಿ ಮಾಡಲು ಸಿಬಿಐ ಇದೇಯಾ ಎಂದು ಗುಡುಗಿದರು.

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನ ಉಪನ್ಯಾಸ ಕಾರ್ಯಕ್ರಮ ರದ್ದು ಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕನ್ನಯ್ಯ, ಕಾನೂನು ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪ ಕುಲಪತಿ ತಿಳಿಸಿದ್ದಾರೆ. ಹಾಗಾದರೆ ಪೊಲೀಸರು ಯಾಕಿದ್ದಾರೆ? ಅವರ ಸಹಾಯದಿಂದ ಉಪನ್ಯಾಸ ಕಾರ್ಯಕ್ರಮ ನಡೆಸಬಹುದಿತ್ತು. ಬಲ ಪಂಥೀಯರ ಬೆದರಿಕೆಗೆ ಹೆದರಿ ಅನುಮತಿ ನಿರಾಕರಿಸಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.

Gulbarga University

ರಾಜ್ಯ ಸರ್ಕಾರ ನನ್ನ ಕಾರ್ಯಕ್ರಮ ರದ್ದು ಪಡಿಸಬಹುದೇ ಹೊರತು ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಸಂಶೋಧನಾ ವಿಷಯದ ಮೇಲೆ ನಾನು ಮಾತನಾಡುವುದಿಲ್ಲ ಎನ್ನುವ ಕಾರಣವೊಡ್ಡಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ನಾನು ಸಂಶೋಧನೆ ಮಾಡಿಯೇ ಪಿಎಚ್.ಡಿ ಪೂರ್ಣಗೊಳಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಶೋಧನೆ ಆಧಾರಿಸಿದ ಭಾಷಣ ಮಾಡಲು ಆಗುತ್ತಾ? ಅವರ ಭಾಷಣದಲ್ಲಿ ಎಷ್ಟು ಸತ್ಯವಿದೆ. ಪದವಿ ಶಿಕ್ಷಣ ಪಡೆಯದವರು ದೇಶ ನಡೆಸುತ್ತಿದ್ದಾರೆ. ಅವರು ಉಪ ಕುಲಪತಿಗಳ ಮೂಲಕ ನನ್ನ ಉಪನ್ಯಾಸ ಕಾರ್ಯಕ್ರಮ ರದ್ದುಪಡಿಸಿದ್ದಾರೆ ಎಂದು ಗುಡುಗಿದರು.

ಇದು ವಿಶ್ವ ಗುರು ಬಸವಣ್ಣನವರ ಭೂಮಿ. ವಿದ್ಯಾರ್ಥಿಗಳಿಂದ ಆಮಂತ್ರಣ ನೀಡಿದ್ದಕ್ಕೆ ನಾನು ಬಂದಿದ್ದೇನೆ. ಆದರೆ ರಾಜಕೀಯದವರ ಒತ್ತಡಕ್ಕೆ ಮಣಿದು ನನ್ನ ಉಪನ್ಯಾಸ ರದ್ದುಗೊಳಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ರಾಜಕಾರಣಿಗಳು ಬಂದು ರಾಜಕೀಯ ಭಾಷಣ ಮಾಡುತ್ತಾರೆ. ಹಾಗಾದರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Kanhaiya kumar A

ಇದೇ ಮೊದಲ ಬಾರಿಗೆ ಕಲಬುರಗಿಗೆ ಬಂದಿದ್ದೇನೆ. ನನ್ನ ಉಪನ್ಯಾಸ ರದ್ದುಗೊಳಿಸಿದರೂ ಪ್ರಚಾರ ಸಿಗುತ್ತದೆ. ನನ್ನ ಉಪನ್ಯಾಸದಿಂದ ವಂಚಿತರಾದ ವಿದ್ಯಾರ್ಥಿಗಳು ಗೂಗಲ್, ಯೂಟ್ಯೂಬ್‍ನಲ್ಲಿ ನನ್ನ ಬಗ್ಗೆ ತಿಳಿದುಕೊಳ್ಳುತ್ತಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರುತ್ತಾರೆ. ತಮ್ಮ ಮೊಬೈಲ್‍ನಲ್ಲಿ ಉಪನ್ಯಾಸವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ ಎಂದು ತಿಳಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನನ್ನ ಉಪನ್ಯಾಸ ಕಾರ್ಯಕ್ರಮವನ್ನು ಕೆಲವರು ಕುತಂತ್ರಿ ಬುದ್ಧಿಯಿಂದ ತಡೆದಿರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಯಾರಿಂದಲೂ ನಮ್ಮ ಭಾಷಣವನ್ನು ತಡೆಯಲು ಸಾಧ್ಯವಿಲ್ಲ. ನನ್ನ ಭಾಷಣ, ವಿಚಾರಧಾರೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪುತ್ತವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *