ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ನಟನೆಯ ‘ಸೈರಾ ನರಸಿಂಹರೆಡ್ಡಿ’ ಚಿತ್ರವನ್ನು ವೀಕ್ಷಿಸಿದ 7 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಬುಧವಾರ ಕೊಯಿಲ್ಕುಂಟ್ಲಾದ ಚಿತ್ರಮಂದಿರದಲ್ಲಿ 7 ಮಂದಿ ಸಬ್ ಇನ್ಸ್‌ಪೆಕ್ಟರ್ ತಮ್ಮ ಕರ್ತವ್ಯ ಮರೆತು ಸೈರಾ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ತಕ್ಷಣ ಈ ಫೋಟೋ ವೈರಲ್ ಆಗಿದೆ.
ಈ ವೈರಲ್ ಫೋಟೋ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಕೆ. ಫಕೀರಪ್ಪ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಏಳು ಮಂದಿ ಪೊಲೀಸರ ಬಗ್ಗೆ ತನಿಖೆ ನಡೆಸುವಂತೆ ನಂದ್ಯಾಲ್, ಅಲ್ಲಗಡ್ಡ ಹಾಗೂ ಧೋನ್‍ನ ಉಪ ಅಧೀಕ್ಷಕರಿಗೆ ಹೇಳಿದ್ದಾರೆ.
ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ಸೇರಿದ ಈ ಪೊಲೀಸರು ಚಿತ್ರ ವೀಕ್ಷಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದರು. ಅವರು ರಜೆಗಾಗಿ ಅರ್ಜಿಯನ್ನು ಸಲ್ಲಿಸದೇ ಕೆಲಸಕ್ಕೆ ಚಕ್ಕರ್ ಹಾಕಿ ಸಿನಿಮಾ ವೀಕ್ಷಿಸಿದ್ದು ಕರ್ನೂಲ್‍ನ ಎಸ್‍ಐಗೆ ಕೋಪ ತರಿಸಿದೆ. ಹಾಗಾಗಿ ಅವರು 7 ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
ಸದ್ಯ ಸೈರಾ ಸಿನಿಮಾವನ್ನು ನಟ ರಾಮ್ ಚರಣ್ ನಿರ್ಮಿಸುತ್ತಿದ್ದು, ಸ್ಟಾರ್ ನಟರಾದ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.
ಚಿರಂಜೀವಿ ನಾಯಕನಾಗಿರುವ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತವಾಗಿದೆ. ಮೆಗಾ ಸ್ಟಾರ್, ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಇತಿಹಾಸದಲ್ಲಿಯೂ ಕೂಡ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ.